ಪಂಚರಾಜ್ಯಗಳ ಚುನಾವಣೆ | ಅಭ್ಯರ್ಥಿಗಳಲ್ಲಿ ಐವರು ಅತ್ಯಾಚಾರದ ಆರೋಪಿತರು, 22 ಮಂದಿ ಕೊಲೆ ಆರೋಪಿಗಳು, 136 ಮಂದಿ ಅನಕ್ಷರಸ್ಥರು!

Date:

ಪಂಚರಾಜ್ಯಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಸ್ವಘೋಷಿತ ಪ್ರಮಾಣಪತ್ರ ಆಧರಿಸಿದ ವರದಿಯನ್ನು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಮತ್ತು ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಜಂಟಿಯಾಗಿ ಬಿಡುಗಡೆ ಮಾಡಿದೆ.

 

ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿಚಾರದಲ್ಲಿ ಯಾರು ಹೆಚ್ಚು ಸುಭಗರು, ಪ್ರಾಮಾಣಿಕರು, ಸಭ್ಯರು, ಸತ್ಯಸಂಧರು ಎಂದೆಲ್ಲ ಎಣಿಸುವುದು ಹುಚ್ಚುತನ. ಆ ಪದಗಳೆಲ್ಲ ರಾಜಕಾರಣದಲ್ಲಿ ಸವಕಲು ನಾಣ್ಯಗಳು. ಬಹುತೇಕ ರಾಜಕಾರಣಿಗಳಿಗೆ ಪ್ರಾಮಾಣಿಕ ಎಂಬ ಪದ ಬಳಸುವುದು ಆ ಪದದ ಮೌಲ್ಯ ಕಳೆದಂತೆಯೇ ಸರಿ.

ಮಿಜೋರಾಂ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಚುನಾವಣೆಗಳು ನಡೆಯುತ್ತಿವೆ. ಇದೇ 30ರಂದು ಕಡೆಯ ಹಂತದ ಮತದಾನ ನಡೆಯಲಿದೆ. ಐದೂ ರಾಜ್ಯಗಳ ಮತ ಎಣಿಕೆ ಡಿಸೆಂಬರ್‌ 3ರಂದು ನಡೆಯಲಿದೆ. ಅಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಶೈಕ್ಷಣಿಕ, ಆರ್ಥಿಕ ಮತ್ತು ಅಪರಾಧ ಹಿನ್ನೆಲೆ ಏನು, ಯಾವ ರಾಜ್ಯದಲ್ಲಿ ಕೋಟಿಪತಿ ಅಭ್ಯರ್ಥಿಗಳು ಹೆಚ್ಚು ಇದ್ದಾರೆ, ಸ್ತ್ರೀ ಪೀಡಕರು, ಕೊಲೆ ಆರೋಪಿಗಳು ಎಷ್ಟಿದ್ದಾರೆ, ಶೈಕ್ಷಣಿಕ ಅರ್ಹತೆ ಏನು, ಎಷ್ಟು ಮಂದಿ ಅನಕ್ಷರಸ್ಥರಿದ್ದಾರೆ ಈ ಎಲ್ಲ ಮಾಹಿತಿಗಳಿರುವ ವರದಿಯನ್ನು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಮತ್ತು ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಜಂಟಿಯಾಗಿ ಬಿಡುಗಡೆ ಮಾಡಿದೆ.

ಕೋಟಿಪತಿ ಅಭ್ಯರ್ಥಿಗಳು: ವರದಿಯ ಪ್ರಕಾರ ಅತ್ಯಂತ ಹೆಚ್ಚು ಕೋಟಿಪತಿ ಅಭ್ಯರ್ಥಿಗಳಿರುವ ರಾಜ್ಯ ಮಿಜೋರಾಂ. ಅಲ್ಲಿ 174 ಅಭ್ಯರ್ಥಿಗಳ ಪೈಕಿ 114 ಅಭ್ಯರ್ಥಿಗಳು ಕೋಟಿ ವೀರರು, ಅಂದರೆ ಶೇ. 66ರಷ್ಟು ಕೋಟ್ಯಾಧಿಪತಿಗಳು ಚುನಾವಣಾ ಕಣದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ರಾಜಸ್ಥಾನವಿದೆ. ಅಲ್ಲಿನ 1875 ಅಭ್ಯರ್ಥಿಗಳಲ್ಲಿ 651 ಮಂದಿಯ ಆಸ್ತಿ ಮೌಲ್ಯ ಕೋಟಿಗಳಲ್ಲಿವೆ, ಅಂದರೆ ಶೇ 35ರಷ್ಟು. ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶವಿದೆ. ಅಲ್ಲಿ 2534 ಅಭ್ಯರ್ಥಿಗಳಲ್ಲಿ 727 ಮಂದಿ ಕೋಟಿಪತಿಗಳು, ಅಂದರೆ ಶೇ 29ರಷ್ಟು. ಛತ್ತೀಸ್‌ಗಡದಲ್ಲಿ 1178 ಅಭ್ಯರ್ಥಿಗಳಲ್ಲಿ 299 ಮತ್ತು ತೆಲಂಗಾಣದಲ್ಲಿ 2290ರಲ್ಲಿ 580 ಅಭ್ಯರ್ಥಿಗಳು ಕೋಟಿಪತಿಗಳು, ಶೇ 25ರಷ್ಟು. ಒಟ್ಟು 2371 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ತ್ರೀ ಪೀಡಕರು, ಕೊಲೆ ಆರೋಪಿಗಳು: ಅಭ್ಯರ್ಥಿಗಳೇ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಂತೆ 107 ಮಂದಿ ಸ್ತ್ರೀಯರ ವಿರುದ್ಧ ದೌರ್ಜನ್ಯ ನಡೆಸಿದ ಆರೋಪ ಹೊತ್ತವರು. ಅವರಲ್ಲಿ ಐವರು ಅತ್ಯಾಚಾರದ ಆರೋಪಿತರು! 82 ಮಂದಿ ಕೊಲೆ ಪ್ರಯತ್ನದ ಆರೋಪಿಗಳು, 22ಮಂದಿ ಕೊಲೆ ಆರೋಪ ಹೊತ್ತವರು ಇದ್ದಾರೆ. ಮಹಿಳೆಯರ ಮೇಲಿನ ಕಿರುಕುಳದ ಆರೋಪಿತ ಅಭ್ಯರ್ಥಿಗಳಲ್ಲಿ 45 ಮಂದಿ ತೆಲಂಗಾಣದವರು, 36 ಮಂದಿ ರಾಜಸ್ಥಾನದವರು, 24 ಮಂದಿ ಮಧ್ಯಪ್ರದೇಶದವರು, ಇಬ್ಬರು ಛತ್ತೀಸ್‌ಗಡದವರು, ಮಿಜೋರಾಂನಲ್ಲಿ ಯಾರೂ ಇಲ್ಲ. ಕೊಲೆ ಆರೋಪ ಹೊತ್ತವರಲ್ಲಿ ಮಧ್ಯಪ್ರದೇಶದ 10 ಅಭ್ಯರ್ಥಿಗಳು, ತೆಲಂಗಾಣದ 7 ಮಂದಿ, ರಾಜಸ್ಥಾನದ 4 ಮಂದಿ, ಛತ್ತೀಸ್‌ಗಡದ ಒಬ್ಬರು ಇದ್ದಾರೆ.

136 ಮಂದಿ ಅನಕ್ಷರಸ್ಥರು: ಐದು ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರಲ್ಲಿ 136 ಮಂದಿ ತಾವು ಅನಕ್ಷರಸ್ಥರು, 320 ಮಂದಿ ತಾವು ಕೇವಲ ಅಕ್ಷರಸ್ಥರು ಎಂದು ಘೋಷಿಸಿಕೊಂಡಿದ್ದಾರೆ. 3645 ಅಭ್ಯರ್ಥಿಗಳು 5ರಿಂದ 12ನೇ ತರಗತಿಯವರೆಗೆ ಶಿಕ್ಷಣ ಪಡೆದವರು. 146 ಮಂದಿ ಡಿಪ್ಲೊಮಾ ಮತ್ತು 3794 ಅಭ್ಯರ್ಥಿಗಳು ಪದವೀಧರರು.

61ರಿಂದ 80ವರ್ಷದೊಳಗಿನ ಅಭ್ಯರ್ಥಿಗಳು ಸಂಖ್ಯೆ 1066, ಅದರಲ್ಲಿ 12 ಅಭ್ಯರ್ಥಿಗಳ ವಯಸ್ಸು 80 ಮೀರಿದೆ.

ಲಿಂಗಾನುಪಾತ: ಐದು ರಾಜ್ಯಗಳಲ್ಲಿ ಒಟ್ಟು 7218 ಪುರುಷರು ಸ್ಪರ್ಧಿಸುತ್ತಿದ್ದರೆ, ಕೇವಲ 831 ಮಹಿಳೆಯರು ಅಭ್ಯರ್ಥಿಗಳಾಗಿದ್ದಾರೆ. ಅಂದ್ರೆ ಇದು ಕೇವಲ 10%. ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಕಣದಲ್ಲಿದ್ದಾರೆ.

ಪ್ರಧಾನಿ ಮೋದಿ ಅವರು ಎರಡು ತಿಂಗಳ ಹಿಂದೆ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲಾತಿ ಮಸೂದೆ ಪಾಸು ಮಾಡಿ ʼನಮ್ಮದು ಮಹಿಳಾ ಪರ ಸರ್ಕಾರʼ ಎಂದು ಬೆನ್ನು ತಟ್ಟಿಕೊಂಡರಷ್ಟೇ. ಅದಾಗಿ ಒಂದು ತಿಂಗಳಲ್ಲಿ ಘೋಷಣೆಯಾದ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಬಿಜೆಪಿಯಿಂದ ಟಿಕೆಟ್‌ ಕೊಟ್ಟು ಮಹಿಳಾಪರ ನೈಜ ಕಾಳಜಿ ತೋರಿಸಲು ಅವಕಾಶ ಇತ್ತು. ಬೇರೆ ಪಕ್ಷಗಳಿಗೆ ಅದು ಪ್ರೇರಣೆಯಾಗುತ್ತಿತ್ತು.

ಇದನ್ನೂ ಓದಿ ಪ್ರತಿಕೃತಿ ಸುಟ್ಟು ’ಮಹಾಧರಣಿ’ ಸಮಾಪ್ತಿ; ಬಿಜೆಪಿ ಸೋಲಿಸಲು ನಿರ್ಧಾರ

ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವುದು ಮತ್ತು ಕ್ರಿಮಿನಲ್‌ ಹಿನ್ನೆಲೆ ಇಲ್ಲದ ವ್ಯಕ್ತಿಗಳನ್ನು ಏಕೆ ಆಯ್ಕೆ ಮಾಡುತ್ತಿಲ್ಲ ಎಂಬ ಬಗ್ಗೆ ಕಾರಣಗಳನ್ನು ನೀಡಬೇಕು ಎಂದು  2020 ಫೆ. 13ರಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ರಾಜಕೀಯ ಪಕ್ಷಗಳು ವ್ಯಕ್ತಿಯ ಜನಪ್ರಿಯತೆ, ಉತ್ತಮ ಸಮಾಜಸೇವೆ, ರಾಜಕೀಯ ಪ್ರೇರಿತ ಪ್ರಕರಣಗಳು ಎಂಬ ಕ್ಷುಲ್ಲಕ ಕಾರಣಗಳನ್ನು ನೀಡಿವೆ. ಇವು ಸಮರ್ಪಕ ಕಾರಣಗಳಲ್ಲ ಎಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ. ಸದ್ಯದ ಈ ಅಂಕಿ-ಅಂಶಗಳನ್ನು ನೋಡಿದರೆ ರಾಜಕೀಯ ಪಕ್ಷಗಳಿಗೆ ಚುನಾವಣಾ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಹಾಗೂ ಕಾನೂನು ಮುರಿಯುವವರೇ ಕಾನೂನು ರೂಪಿಸುವವರಾಗುವ ಮೂಲಕ ಪ್ರಜಾಪ್ರಭುತ್ವವು ಅವರ ಕೈಯಲ್ಲಿ ನರಳುವುದು ಮುಂದುವರಿಯಲಿದೆ ಎಂಬುದನ್ನು ತೋರಿಸುತ್ತದೆ ಎಂದು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಹೇಮಾ ವೆಂಕಟ್‌
+ posts

ಪತ್ರಕರ್ತೆ

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ಪತ್ರಕರ್ತೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಶ್ನಾತೀತ ಪ್ರಪಂಚವೂ ಪ್ರಜ್ಞಾವಂತ ಸಮಾಜವೂ ಪ್ರಶ್ನಿಸುವ ವಿವೇಕವೂ: ನಾ ದಿವಾಕರ ಬರೆಹ

ಪ್ರಶ್ನಾತೀತತೆ ಬೇರೂರಿದಷ್ಟೂ ಸಮಾಜವು ತನ್ನ ವಿಮರ್ಶಾತ್ಮಕ ದೃಷ್ಟಿಕೋನವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಚಿಕಿತ್ಸಕ...

ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

"ಧರ್ಮ, ಧರ್ಮ"ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನು ನಿಷ್ಠೆಯಿಂದ...

ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಹೋರಾಟದ 'ಕಿಸಾನ್ ಸತ್ಯಾಗ್ರಹ'ವನ್ನು ನೋಡುವ, ಆ ಮೂಲಕ...

ಬೆಹನೋಂ ಔರ್ ಭಾಯಿಯೋಂ… ಅಮೀನ್ ಸಯಾನಿ ಇನ್ನಿಲ್ಲ

ಭಾರತೀಯ ಉಪಖಂಡವನ್ನು ಹಲವು ತಲೆಮಾರುಗಳ ಕಾಲ ಉಲ್ಲಾಸಗೊಳಿಸಿದ, ಮೃದುಮಧುರ ಕಂಠದ ಒಡೆಯ...