ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಕನಸಿದ ಪಶು ಆಸ್ಪತ್ರೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉದ್ಘಾಟಿಸಿದ್ದಾರೆ.
ಲೀಲಾವತಿ ಅವರು ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದು, ಹಾಸಿಗೆ ಹಿಡಿದಿದ್ದಾರೆ. ಅವರು ತಾವು ವಾಸಿಸುತ್ತಿರುವ ಸೋಲದೇವನಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಿದ್ದರು. ಇದೀಗ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದ್ದು, ಮಂಗಳವಾರ ಉದ್ಘಾಟನೆಗೊಂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, “ಕೆಲ ದಿನಗಳ ಹಿಂದೆ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿದ್ದರು. ಪಶು ಆಸ್ಪತ್ರೆ ನಿರ್ಮಾಣ ಮಾಡಿದ್ದೀವಿ. ಉದ್ಘಾಟನೆಗೆ ಬನ್ನಿ ಎಂದಿದ್ದರು. ಅವರಿಬ್ಬರೂ ಒಂದು ದೊಡ್ಡ ಸಂದೇಶ ಕೊಟ್ಟಿದ್ದಾರೆ. ಎಷ್ಟೇ ದುಡ್ಡಿದ್ದರೂ ಅವರಿಗೆ ಇರುವ ಮನಸ್ಸು ಯಾರಿಗೂ ಬರಲ್ಲ” ಎಂದಿದ್ದಾರೆ.
“ಲೀಲಾವತಿ ಅವರು ಬಹಳ ಶ್ರೀಮಂತರಲ್ಲ. ಆದರೆ, ಸಮಾಜಕ್ಕೆ ಕೊಡುಗೆ ಕೊಡಬೇಕೆಂಬ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಲಾವಿದರಿಗೆ ಪೆನ್ಶನ್ ಕೊಡಿ ಎಂಬ ಬೇಡಿಕೆಯನ್ನು ವಿನೋದ್ ಕೊಟ್ಟಿದ್ದಾರೆ. ಅದನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದ್ದಾರೆ.