ತಮ್ಮ ವಿರುದ್ಧದ ಸಿಬಿಐ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ ಶಿವಕುಮಾರ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿ, ನ್ಯಾಯಾಲಯವು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಆದೇಶ ನೀಡಿದ್ದು, ಮೇಲ್ಮನವಿ ಹಿಂಪಡೆದುಕೊಳ್ಳುವ ಅವಕಾಶವಿದೆ ಎಂದು ತಿಳಿಸಿದೆ. ಆ ಮೂಲಕ ಹೈಕೋರ್ಟ್, ಶಿವಕುಮಾರ್ ಅವರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ.
ಇದೇ ವೇಳೆ ನ್ಯಾಯಾಲಯವು, ಸಿಬಿಐ ವಾದವನ್ನು ತಳ್ಳಿ ಹಾಕಿದ್ದು, ಅರ್ಜಿದಾರರಿಗೆ ಮೇಲ್ಮನವಿ ಹಿಂಪಡೆದುಕೊಳ್ಳುವ ಅವಕಾಶವಿದೆ ಎಂದು ಪಂಜಾಬ್ ಸರ್ಕಾರ ವರ್ಸಸ್ ಗುರುದೇವ್ ಪ್ರಕರಣವನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದೇ ವೇಳೆ, ‘ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ತೀರ್ಮಾನ ನೀಡುತ್ತಿಲ್ಲ’ ಎಂದು ನ್ಯಾಯಾಲಯವು ಹೇಳಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ 2021ರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು.
ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಕಪಿಲ್ ಸಿಬಲ್, ಡಿಕೆ ಶಿವಕುಮಾರ್ ಪರ ಅಭಿಷೇಕ್ ಮನು ಸಿಂಘ್ವಿ, ಸಿಬಿಐ ಪರ ಪ್ರಸನ್ನಕುಮಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪರ ವೆಂಕಟೇಶ್ ದಳವಾಯಿ ವಾದ ಮಂಡಿಸಿದರು. ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಆದೇಶವನ್ನು ಅಡ್ವೊಕೇಟ್ ಜನರಲ್ ಶಶಿಕರಣ್ ಶೆಟ್ಟಿ ನ್ಯಾಯಾಲಯದ ಗಮನಕ್ಕೆ ತಂದು ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದರು.
ಸಿಬಿಐ ಪರ ವಾದ ಮಂಡಿಸಿದ ವಕೀಲ ಪ್ರಸನ್ನಕುಮಾರ್, ‘ಈಗಾಗಲೇ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದೆ. ಇಂತಹ ಸಮಯದಲ್ಲಿ ಕ್ಯಾಬಿನೆಟ್ ಈ ರೀತಿ ನಿರ್ಧಾರ ಮಾಡೋದು ಕಾನೂನುಬಾಹಿರ’ ಎಂದು ವಾದ ಮಂಡಿಸಿದರು.
ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್, ‘ಇಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ತನಿಖೆಯ ಹಾದಿಯನ್ನು ತಪ್ಪಿಸಲು ಯತ್ನ ನಡೆದಿದೆ. ತನಿಖೆ ಅರ್ಧಕ್ಕೆ ನಿಲ್ಲಲು ಅವಕಾಶ ನೀಡಬಾರದು. ಸಿಬಿಐ ತನಿಖೆ ಮುಂದುವರಿಯಬೇಕು. ಕ್ಯಾಬಿನೆಟ್ ಇಷ್ಟೊಂದು ವೇಗವಾಗಿ ನಿರ್ಧಾರ ತೆಗೆದುಕೊಂಡಿದ್ದು ನಾವು ನೋಡಿಲ್ಲ. ಇಡೀ ಸಂಪುಟ ಡಿಸಿಎಂ ಪರ ನಿಂತು ಆದೇಶ ಮಾಡಿದೆ. ಸರ್ಕಾರ ಆದೇಶ ಉಲ್ಲಂಘನೆ ಮಾಡಬಹುದೇ’ ಎಂದು ಪ್ರಶ್ನೆ ಮಾಡಿದರು.
ಎಲ್ಲ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು, “ಡಿಕೆ ಶಿವಕುಮಾರ್ ಅವರಿಗೆ ಮೇಲ್ಮನವಿ ಹಿಂಪಡೆದುಕೊಳ್ಳುವ ಅವಕಾಶವಿದೆ. ಆದರೆ ಕ್ಯಾಬಿನೆಟ್ ತೆಗೆದುಕೊಂಡಿರುವ ತೀರ್ಮಾನಕ್ಕೆ ಸಂಬಂಧಿಸಿ ನಾವು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ” ಎಂದು ತಿಳಿಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧದ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ಡಿಸಿಎಂ ಡಿಕೆ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು.
ಯತ್ನಾಳ್ ಅರ್ಜಿ ಅನಗತ್ಯ: ಹೈಕೋರ್ಟ್
ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಮಧ್ಯಂತರ ಅರ್ಜಿ ಸಲ್ಲಿಸಿ, ‘ನನ್ನನ್ನೂ ಕೂಡ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಬೇಕು’ ಎಂದು ತಿಳಿಸಿದ್ದರು. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ‘ನಿಮ್ಮನ್ನು ಈ ಪ್ರಕರಣದಲ್ಲಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ತಿಳಿಸಿದೆ. ಆ ಮೂಲಕ ಬಿಜೆಪಿ ಶಾಸಕನ ಉತ್ಸಾಹಕ್ಕೆ ಹೈಕೋರ್ಟ್ ತಣ್ಣೀರೆರಚಿದೆ.