ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಮುದುವೆಯಾಗುವುದಾಗಿ ನಂಬಿಸಿ 7 ತಿಂಗಳ ಗರ್ಭಿಣಿಯಾದ ಬಳಿಕ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಕಾಮುಕ ಆರೋಪಿಯನ್ನು ಬೆಂಗಳೂರು ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಈ ಘಟನೆ ನಡೆದಿದೆ. 36 ವರ್ಷದ ವಿವಾಹಿತ ಮಹಿಳೆಯೊಬ್ಬರು ಖಾಸಗಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ, ಪರಿಚಯವಾದ ಮಹೇಶ ಎಂಬಾತ ಆ ಮಹಿಳೆಯ ಜತೆಗೆ ಸ್ನೇಹ ಬೆಳೆಸಿ ಬಳಿಕ ಪ್ರೀತಿ ಎಂದು ಆಕೆಯ ಹಿಂದೆ ಬಿದ್ದಿದ್ದಾನೆ.
ನೀನು ದಲಿತ ಜನಾಂಗಕ್ಕೆ ಸೇರಿದರೂ ಪರವಾಗಿಲ್ಲ, ನಿನ್ನ ಗಂಡನನ್ನು ಬಿಟ್ಟು ಬಾ, ನಾನು ನಿನ್ನನ್ನೂ ಮದುವೆಯಾಗುತ್ತೇನೆ ಎಂದು ಮಹೇಶ್ ಮಹಿಳೆಗೆ ಹೇಳಿದ್ದಾನೆ. ಮಹಿಳೆ ಇಷ್ಟವಿಲ್ಲ ಎಂದು ಹೇಳಿದ್ದರೂ ಬಿಟ್ಟುಬಿಡದೆ ಆಕೆಯ ಬೆನ್ನುಬಿದ್ದಿದ್ದಾನೆ.
ಈ ವಿಚಾರ ತಿಳಿದ ಮಹಿಳೆಯ ಪತಿ ಜಗಳ ಮಾಡಿ ಆಕೆಯನ್ನು ತೊರೆದಿದ್ದಾನೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡ ಆರೋಪಿ ಆಕೆಯ ಜತೆಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಮಹಿಳೆ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ.
ಮಹಿಳೆ ಈ ವಿಚಾರವನ್ನು ಆರೋಪಿ ಮಹೇಶ ತಂಗಿಗೆ ತಿಳಿಸಿದ್ದಾರೆ. ಮಹೇಶನ ತಂಗಿ ಮಹಿಳೆಗೆ ಹೀನ ಜಾತಿಯವಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈ ಘಟನೆ ಬಳಿಕ ಮಹೇಶ ಮತ್ತು ಮಹಿಳೆ ಇಬ್ಬರೂ ಬಾಡಿಗೆ ಮನೆ ಮಾಡಿ ಸಂಸಾರ ನಡೆಸಿದ್ದಾರೆ.
ಕೆಲ ದಿನಗಳ ಬಳಿಕ ಮಹೇಶ್ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಇದರಿಂದ ಅನುಮಾನಗೊಂಡ ಮಹಿಳೆ ಕೆಲವರನ್ನು ವಿಚಾರಿಸಿದಾಗ ಮಹೇಶಗೆ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ಇದರಿಂದ ಮನನೊಂದು ಆರೋಪಿ ಮಹೇಶ್ ಹಾಗೂ ಆತನ ತಂಗಿ ವಿರುದ್ಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಮತ್ತಿಬ್ಬರ ಬಂಧನ
ಮಹಿಳೆ ನೀಡಿದ ದೂರಿನ ಮೇಲೆ ಆರೋಪಿ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ನೆಲಮಂಗಲ ಟೌನ್ ಪೊಲೀಸ್ ಅಧಿಕಾರಿಯೊಬ್ಬರು, “ದಲಿತ ಮಹಿಳೆಯೆಂದು ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ” ಎಂದರು.