- ಅನಗತ್ಯವಾಗಿ ವಿವಾದ ಸೃಷ್ಟಿಸಲು ನಾನು ಇಲ್ಲಿಗೆ ಬಂದಿಲ್ಲ
- ಇಷ್ಟಕ್ಕೂ ಸದರಿ ಇಲಾಖೆ ನನಗೆ ಬರುವುದೇ ಇಲ್ಲ: ಬೈರೇಗೌಡ
ಸಚಿವರ ಹೇಳಿಕೆಯಿಂದ ನನಗೆ ಅಪಮಾನವಾಗಿದೆ. ನನ್ನ ಮೇಲಿನ ಆರೋಪದ ಕುರಿತು ತನಿಖೆಯಾಗಿ, ಆರೋಪ
ಮುಕ್ತವಾಗುವವರೆಗೂ ಸದನಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕುರಿತು ಮುಖ್ಯಮಂತ್ರಿಗಳೇ ಮುಂದಿನ
ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಜಯಪುರದಲ್ಲಿ ಬುಧವಾರ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಸದ್ಯ ವಿಜಯಪುರ ಜಿಲ್ಲೆಯ ಜನರ ಸಮಸ್ಯೆ ಇದ್ದರೆ ಮಾತ್ರ ತಮ್ಮೊಂದಿಗೆ ಚರ್ಚಿಸುತ್ತೇನೆ. ಅನಗತ್ಯವಾಗಿ ವಿವಾದ ಸೃಷ್ಟಿಸಲು ನಾನು ಇಲ್ಲಿಗೆ ಬಂದಿಲ್ಲ” ಎಂದರು.
“ಈ ಕುರಿತು ನಾನು ಸದನದಲ್ಲಿ ಉತ್ತರಿಸಿರುವ ವಿಷಯದ ಕುರಿತು ಮಾಹಿತಿ ನೀಡುತ್ತೇನೆ. ಸದನದಲ್ಲಿ ಏನು ಹೇಳಿದ್ದೇನೆ, ಏನು ಬಿಟ್ಟಿದ್ದೇನೆ ಎಂಬುದನ್ನು ನೀವೇ ತೀರ್ಮಾನಿಸಿ” ಎಂದು ಹೇಳಿದರು.
”ಸಚಿವರ ಹೇಳಿಕೆಯಿಂದ ನನಗೆ ಅವಮಾನವಾಗಿದೆ ಎಂದು ಶಾಸಕ ಬಿ ಆರ್ ಪಾಟೀಲ್ ಹೇಳಿರುವ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ. ಸದ್ಯ ವಿಜಯಪುರ ಜಿಲ್ಲೆಯ ಪ್ರಗತಿ ಪರಿಶೀಲನಾ ಪ್ರವಾಸದಲ್ಲಿರುವ ನಾನು, ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ
“ಭೂ ಸೇನಾ ನಿಗಮದಲ್ಲಿ ಹಣ ಇಲ್ಲ ಎಂಬ ವಿಚಾರದ ಕುರಿತಾಗಿ ಸದನದಲ್ಲಿನ ಮಾಹಿತಿಯ ಪ್ರತಿಯನ್ನೇ ಪತ್ರಕರ್ತರಿಗೆ ನೀಡುತ್ತೇನೆ, ನೀವೆ ನೋಡಿ ತಿಳಿಯಿರಿ” ಎಂದರು.
”ಇಷ್ಟಕ್ಕೂ ಸದರಿ ಇಲಾಖೆ ನನಗೆ ಬರುವುದೇ ಇಲ್ಲ. ಶಾಸಕ ಬಿ ಆರ್ ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತನಿಖೆ ಮಾಡುವುದು ಬಿಡುವುದು ಆ ಇಲಾಖೆಗೆ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ನನಗೆ ಸಂಬಂಧ ಇಲ್ಲದ ಇಲಾಖೆ ತನಿಖೆ ಕುರಿತು ನಾನು ಹೇಳಿಕೆ ನೀಡುವುದು ಸರಿಯಲ್ಲ” ಎಂದು ಹೇಳಿದರು.
“ರಾಜ್ಯದಲ್ಲಿ ಮಳೆ ಇಲ್ಲದೇ ಭೀಕರ ಬರ ಆವರಿಸಿದೆ. ಕಂದಾಯ ಇಲಾಖೆಯಲ್ಲಿ ಜನರ ಹತ್ತು ಹಲವು ಸಮಸ್ಯೆಗಳಿವೆ. ಪ್ರತಿ ಜಿಲ್ಲೆಗೂ ಹೋಗಿ ಆಯಾ ಜಿಲ್ಲೆಯ ಸಮಸ್ಯೆ ಆಲಿಸಿ, ಪರಿಹಾರ ಕಾರ್ಯಕ್ಕೆ ಮುಂದಾಗಬೇಕಿದೆ” ಎಂದು ತಿಳಿಸಿದರು.