ಜಾತಿಯ ಕಾರಣದಿಂದಲೇ ಬದುಕುವ ಹಕ್ಕುಗಳಿಂದ ನಿರಾಕರಣೆಗೊಂಡು ಹಸಿವು, ಅನಕ್ಷರತೆ, ನಿರುದ್ಯೋಗಗಳಡಿಯಲ್ಲಿ, ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ತಬ್ಬಲಿ ಸಮುದಾಯಗಳನ್ನು ಗುರುತಿಸುವ ಮೂಲಕ ಸರ್ಕಾರದ ಯೋಜನೆಗಳು ಇಂತಹ ಸಮುದಾಯಗಳಿಗೆ ತಲುಪುವಂತೆ ನೋಡಿಕ್ಕೊಳ್ಳುವ ಜವಾಬ್ಧಾರಿ ಕೇವಲ ಸರ್ಕಾರದಷ್ಟೇ ಅಲ್ಲ, ನಾಗರಿಕ ಸಮಾಜದ್ದೂ ಹೌದು
ಆಧುನಿಕತೆಯ, ಶಿಕ್ಷಣದ ಪರಿಣಾಮ ಜಾತಿ ವಿನಾಶವಾಗುತ್ತದೆಂಬ ಮಾತು ಸುಳ್ಳಾಗಿದೆ. ಜಾತಿವಾದ, ಕೋಮುವಾದ, ಲಿಂಗ ತಾರತಮ್ಯ, ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ದುರಿತ ಕಾಲವಿದು. ಜಾತಿ, ಲಿಂಗಾಧಾರಿತ ಹಿಂಸೆ ಮತ್ತು ಕೊಲೆಯ ಮೂಲಕ ದಲಿತರನ್ನ ಭಯದಲ್ಲಿರಿಸುವ ವಿಕೃತಿಗಳು ದಿನೇ ದಿನೇ ಹೆಚ್ಚುತ್ತಿವೆ. ಪ್ರತಿ ವರ್ಷ ಭಾರತ ಸರ್ಕಾರ ಅಪರಾಧ ದಾಖಲೆಗಳ ಬ್ಯುರೋ ಬಿಡುಗಡೆ ಮಾಡುವ ದಾಖಲೆಗಳನ್ನು ಗಮನಿಸಿದರೆ ಈ ದೇಶದ ದಲಿತರು ಅನುಭವಿಸುತ್ತಿರುವ ಸಂಕಟಗಳ ತೀವ್ರತೆಯ ಅರಿವಾಗುತ್ತದೆ. ಸಾಮಾಜಿಕ ಸಂಕಟಗಳನ್ನು ಅನುಭವಿಸುವುದರ ಜೊತೆಗೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಹಿಂದುಳಿದಿರುವ ದಲಿತ ಸಮುದಾಯಗಳು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಬದುಕು ದೂಡುತ್ತಿರುವುದು ವಾಸ್ತವ ಸತ್ಯವೇ ಹೌದು.
ಇದಿಷ್ಟು ಅಂಕೆ ಸಂಖ್ಯೆಗಳಿಗಾದರೂ ಸಿಕ್ಕುವ ಸಮುದಾಯಗಳ ಕತೆಯಾದರೆ, ಭಾರತದಲ್ಲಿಯೇ ದನಿ ಇಲ್ಲದ ಸಾವಿರಾರು ಸಣ್ಣ ಸಣ್ಣ ಜಾತಿಗಳಿವೆ. ಜಾತಿಯ ಕಾರಣದಿಂದಲೇ ಬದುಕುವ ಹಕ್ಕುಗಳಿಂದ ನಿರಾಕರಣೆಗೊಂಡು ಹಸಿವು, ಅನಕ್ಷರತೆ, ನಿರುದ್ಯೋಗಗಳಡಿಯಲ್ಲಿ, ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ತಬ್ಬಲಿ ಸಮುದಾಯಗಳನ್ನು ಗುರುತಿಸುವ ಮೂಲಕ ಸರ್ಕಾರದ ಯೋಜನೆಗಳು ಇಂತಹ ಸಮುದಾಯಗಳಿಗೆ ತಲುಪುವಂತೆ ನೋಡಿಕ್ಕೊಳ್ಳುವ ಜವಾಬ್ಧಾರಿ ನಾಗರಿಕ ಸಮಾಜದ್ದೂ ಹೌದು. ಆದರೆ ಇಂತಹ ನೈತಿಕತೆಯನ್ನು ಪಾಲಿಸದ ಸಮಾಜ, ಜಾತಿಯ ವಾಸ್ತವತೆಯನ್ನು ಆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಶೋಷಣೆಗಳ ವಿರುದ್ಧ ಪ್ರಶ್ನಿಸುವವರನ್ನು, ಜಾತಿವಾದಿಗಳನ್ನಾಗಿಸುತ್ತಾ, ನಾವೆಲ್ಲಾ ಒಂದು, ಜಾತಿಗಳ ಹೆಸರಿನಲ್ಲಿ ನಮ್ಮನ್ನು ನಾವು ಒಡೆದುಕೊಳ್ಳಬೇಕಾ ಎಂಬ ಆತ್ಮ ವಂಚನೆಯ ಮಾತುಗಳನ್ನಾಡುತ್ತದೆ.
ಸಾವಿರಾರು ಜಾತಿಗಳಿರುವ ಭಾರತದಲ್ಲಿ ಜಾತಿ ಸತ್ಯ. ಇಲ್ಲಿ ಒಡೆದುಕೊಳ್ಳಲು ಇನ್ನೇನು ಉಳಿದಿಲ್ಲ ಎನ್ನುವಷ್ಟು ನಾವು ಒಡೆದು ಹೋಗಿದ್ದೇವೆ. ಸಾಧ್ಯವಾದರೆ ಇನ್ನು ಕೂಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅವಕಾಶ ವಂಚಿತರನ್ನು ಶೋಷಿತರನ್ನು ಗುರುತಿಸುವ ಆ ಮೂಲಕ ಸಾಮಾಜಿಕ ನ್ಯಾಯ ಸ್ಥಾಪಿಸುವಲ್ಲಿ ಜಾತಿ ಗಣತಿ ಪ್ರಬಲ ಅಸ್ತ್ರವೇ ಹೌದು. ಅಸ್ಪೃಶ್ಯತೆ ಅಸಮಾನತೆ ಹಸಿವು ಬಡತನ ಮಹಿಳೆಯರ ಮೇಲಿನ ದೌರ್ಜನ್ಯ ಲಿಂಗ ತಾರತಮ್ಯ ಇವೆಲ್ಲವೂ ಗಳು ತನ್ನಷ್ಟಕ್ಕೆ ತಾನೇ ನಿವಾರಣೆಯಾಗುವುದಿಲ್ಲ. ಈ ವಿಚಾರಗಳನ್ನು ಮುಚ್ಚಿ ಹಾಕುವುದರಿಂದ ಶಮನ ಮಾಡಲು ಸಾಧ್ಯವಿಲ್ಲ. ಶತಮಾನಗಳಿಂದ ಶೋಷಣೆ ಅನುಭವಿಸುತ್ತಿರುವ ದಲಿತರಿಗೆ ಸಾಮಾಜಿಕ ನ್ಯಾಯದ ಮೂಲಕ ವಿಶೇಷ ಸೌಲಭ್ಯ ನೀಡುವುದು ಇಂದಿನ ತುರ್ತು.
ವಿಷಮ ಜಾತಿ ವ್ಯವಸ್ಥೆಯಲ್ಲಿ ಶೋಷಿತ ಜಾತಿಗಳು ಹಾಗೂ ಸಮೂಹಗಳಲ್ಲಿಯೇ ಅತಿ ಹೆಚ್ಚು ಶೋಷಿತರಾಗಿ ಅವಕಾಶಗಳಿಂದ ವಂಚಿತರಾದವರು ದಲಿತ, ಕೆಳತಳ ವರ್ಗದ ಹೆಣ್ಣು ಮಕ್ಕಳು. ಇಡೀ ವ್ಯವಸ್ಥೆಯೇ ಒಕ್ಕೊರಲಾಗಿ ಹಿಂಸೆಯ ಮೂಲಕ ಅವರ ಅಸ್ಥಿತ್ವವನ್ನು ಅಂಚಿಗೆ ತಳ್ಳುತ್ತಿರುವ ಸಂದರ್ಭದಲ್ಲಿ ಜಾತಿಗಣತಿಯ ಮೂಲಕ ಅವರನ್ನು ಕೇಂದ್ರಕ್ಕೆ ಎಳೆದು ತರುವ ಪ್ರಯತ್ನಗಳು ಬಹಳ ಮಹತ್ವದ್ದಾಗಿದೆ. ಭಾರತದಂತಹ ಶ್ರೇಣೀಕರಣ ಸಮಾಜದಲ್ಲಿ ಹೆಣ್ಣಿನ ಜೈವಿಕತೆಯನ್ನು ಮುಖ್ಯ ಮಾಡಿಕೊಂಡು ಮಹಿಳೆಯರನ್ನು ಏಕ ಘಟಕವನ್ನಾಗಿ ನೋಡುವ ಕ್ರಮ ಅಷ್ಟೊಂದು ಸಮಂಜಸವಾಗಲಾರದು.
‘ಪಿತೃ ಪ್ರಧಾನತೆಯ ಮುಖ್ಯ ಚೌಕಟ್ಟು ಎಲ್ಲರಿಗೂ ಒಂದೇ ಹೌದಾದರೂ ಅದು ಜಾರಿಗೊಳ್ಳುವ ಬಗೆಗಳು ಎಲ್ಲೆಡೆ ಒಂದೇ ಆಗಿರುವುದಿಲ್ಲ. ಭಿನ್ನ ಸಮುದಾಯಗಳಲ್ಲಿ ಆಯಾ ಸಂದರ್ಭದಲ್ಲಿ ಇದು ವ್ಯತ್ಯಾಸವಾಗುತ್ತದೆ.’ ಭಾರತದಲ್ಲಿ ಕೆಳತಳ ವರ್ಗದ ದಲಿತ ಹೆಣ್ಣು ಮಕ್ಕಳು ಲಿಂಗ ಆಧಾರಿತ ವಂಚನೆಗಳಿಗೆ ಮಾತ್ರ ಬಲಿಪಶುವಾಗದೆ ಏಕಕಾಲಕ್ಕೆ ಜಾತಿ, ವರ್ಗ ಆಧಾರಿತ ಕ್ರೌರ್ಯಗಳಿಗೂ ಬಲಿಯಾಗುತ್ತಿದ್ದಾರೆ. ಹಾಗಾಗಿಯೇ ಬೇರೆ ವರ್ಗದ ಜಾತಿಯ ಹೆಣ್ಣು ಮಕ್ಕಳಿಗಿಂತ ವಿಭಿನ್ನ ಕಾರಣ ದಲಿತ ಹೆಣ್ಣು ಮಕ್ಕಳ ಆರ್ಥಿಕ, ಸಾಮಾಜಿಕ ಸಾಂಸ್ಕ್ರತಿಕ ವಿನ್ಯಾಸಗಳು ಭಿನ್ನವಾಗಿವೆ.
ಭಾರತ ದೇಶದಲ್ಲಿ ದಲಿತ ವರ್ಗದ ಹೆಣ್ಣು ಮಕ್ಕಳು ತಾರತಮ್ಯವನ್ನಷ್ಟೇ ಅನುಭವಿಸದೆ. ಆಹಾರ, ನೀರಿನಂತಹ ಮೂಲಭೂತ ಅವಶ್ಯಕತೆಯನ್ನು ಪಡೆಯಲು ನಿರಂತರ ಹೋರಾಡುತ್ತಿದ್ದಾರೆ. ಹಸಿವು, ಅಪೌಷ್ಟಿಕತೆ ನೈರ್ಮಲ್ಯ, ಅಶುದ್ಧ ನೀರು ಮೂಲಭೂತ ಆರೋಗ್ಯ ಸೇವೆಗಳ ಪ್ರವೇಶದ ಕೊರತೆಗಳಿಂದಾಗಿ, ಕಾಯಿಲೆಗಳಿಂದ ನರಳುತ್ತ ಅತಿ ಚಿಕ್ಕ ವಯಸ್ಸಿಗೆ ಅಸು ನೀಗುತ್ತಿದ್ದಾರೆ. ದಲಿತ ಮಹಿಳೆಯಾಗಿ ದೌರ್ಜನ್ಯವೆಸಗುವವರ ಗುರಿಗೆ ಸಿಗುವ ಮೊದಲ ಬಪಲಿಪಶುವಾದ ಈಕೆ ಮನೆಯ ಒಳಗೂ ಹೊರಗೂ ಬೌದ್ಧಿಕ ಮತ್ತು ಮಾನಸಿಕ ಹಿಂಸೆ ಹೊಡೆತ, ಬಡಿತ, ಅತ್ಯಾಚಾರ, ಲೈಂಗಿಕ ಕಿರುಕುಳ, ಅಪಹರಣ, ಕಳ್ಳ ಸಾಗಾಣಿಕೆಯ ಬಲಿ ಪಶುವಾಗುತ್ತಿದ್ದಾಳೆ. ಭಾರತ ದೇಶದಲ್ಲಿ 2014 ರಿಂದ 2023 ರವರೆಗೆ ಕಳೆದ ಹತ್ತು ವರ್ಷಗಳಲ್ಲಿ ದಲಿತ ಮಹಿಳೆಯರ ಮೇಲಿನ ಜಾತಿ ದೌರ್ಜನ್ಯ, ಅತ್ಯಾಚಾರ ಕೊಲೆಗಳು ದಿನ ದಿನಕ್ಕೂ ಹೆಚ್ಚುತ್ತಲೇ ಇದೆ. ಮಾನವ ಹಕ್ಕುಗಳ ಸಮೀಕ್ಷೆಯ ಪ್ರಕಾರ ಪ್ರತಿದಿನ ಸರಾಸರಿ 4 ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಯುತ್ತಿವೆ.
ಭಾರತದ ಶ್ರೇಣಿಕೃತ ಜಾತಿ ವ್ಯವಸ್ಥೆ ಮತ್ತು ಇದರೊಳಗಿನ ಅಪಸವ್ಯಗಳು ಮಕ್ಕಳಿಗೆ ಆಹಾರ ಒದಗಿಸುವ ಬಿಸಿಯೂಟದ ಯೋಜನೆಗಳಲ್ಲೂ ಕ್ರೀಯಾಶೀಲವಾಗಿರುವುದು ದುರಂತ. ಜಾತಿಯಲ್ಲಿ ಶ್ರೇಷ್ಠರಾದ ತಮ್ಮ ಮಕ್ಕಳಿಗೆ ಅನ್ನ ಬೇಯಿಸಿ ಹಾಕಿ ತಮ್ಮ ಜಾತಿ ಕೆಡಿಸುತ್ತಿದ್ದಾಳೆಂಬ ಕಾರಣ, ತಾವು ಬಳಸುವ ನೀರಿನ ತೊಟ್ಟಿಯಲ್ಲಿ ನೀರನ್ನು ಕುಡಿದಳೆಂಬ ಕಾರಣ, ನಾವು ನಡೆದಾಡುವ ದೇವಾಲಯಗಳನ್ನು ಪ್ರವೇಶಿಸಿದಳೆಂಬ ಕಾರಣ, ಕೊನೆಗೆ ಇಷ್ಟು ದಿನಗಳ ಕಾಲ ತಾವು ಚಲಾಯಿಸುತ್ತಾ ಬಂದ ಅಧಿಕಾರವನ್ನು ಕಸಿದಳೆಂಬ ಕಾರಣ ದಲಿತ ಹೆಣ್ಣುಮಕ್ಕಳನ್ನು, ನಿಂದಿಸುವ, ತಳಿಸುವ, ಕೌರ್ಯ ನಮ್ಮ ಸುತ್ತಲೂ ಇನ್ನೂ ವಿಜೃಂಬಿಸುತ್ತಲೇ ಇವೆ.
ಇದನ್ನೂ ಓದಿ ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ವರದಿ ಜಾರಿಯಾಗಬೇಕು
ಸಾಮಾಜಿಕವಾದ ಇಂತಹ ದಿವ್ಯ ಸಂಕಟಗಳ ಜೊತೆಯಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿಯೂ ದಲಿತ ಹೆಣ್ಣು ಮಕ್ಕಳು ಬಹಳಷ್ಟು ಹಿಂದುಳಿದಿದ್ದು, ದಲಿತ ಹೆಣ್ಣುಮಕ್ಕಳು ಶಾಲಾ ಹಂತದ ಶಿಕ್ಷಣವನ್ನು ಪೂರೈಸುತ್ತಾರಾದರೂ ಉನ್ನತ ಶಿಕ್ಷಣದಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ. ಇತ್ತೀಚಿಗೆ ಕೇಂದ್ರ ಶಿಕ್ಷಣ ಮಂತ್ರಾಲಯ ಬಿಡುಗಡೆಗೊಳಿಸಿರುವ ಅಖಿಲ ಭಾರತ ಉನ್ನತ ಶಿಕ್ಷಣ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಹೆಣ್ಣುಮಕ್ಕಳ ಸಂಖ್ಯ ಕುಸಿದಿರುವುದು ದಾಖಲಾಗಿದೆ. ಭಾರತದಲ್ಲಿ ಜಾತಿ ಹೆಸರಿನಲ್ಲಿ ಉದ್ಯೋಗದ ಮೇಲಿನ ನಿಬರ್ಂಧ ಆಧುನಿಕ ಭಾರತದಲ್ಲಿಯೂ ಮುಂದುವರೆದಿದ್ದು, ಸಂಘಟಿತ ವಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳಲ್ಲಿ ಉನ್ನತ ಜಾತಿಯ ಮಹಿಳೆಯರದ್ದೇ ಸಿಂಹಪಾಲಿದ್ದು, ಬಹುರಾಷ್ಟ್ರೀಯ ಕಂಪನಿಗಳಲ್ಲಿಯೂ ಕೂಡ ಕೆಳದರ್ಜೆಯಲ್ಲಿ ಮಾತ್ರ ದಲಿತ ಹೆಣ್ಣುಮಕ್ಕಳಿದ್ದು ಉಳಿದಂತೆ ಅನೌಪಚಾರಿಕ ಕ್ಷೇತ್ರಗಳಾದ ಕೃಷಿ, ಕಾರ್ಖಾನೆ, ಮನೆಗೆಲಸ ಮುಂತಾದ ಕ್ಷೇತ್ರಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗೆ ದಲಿತ ಮಹಿಳೆಯರು ಏಕಕಾಲಕ್ಕೆ ಜಾತಿ, ವರ್ಗ, ಲಿಂಗ ನೆಲೆಯಲ್ಲಿ ಶೋಷಿತರಾಗುತ್ತಿದ್ದು ತಮಗಿಂತ ಶೈಕ್ಷಣಿಕವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಮುಂದುವರಿದ ಹೆಣ್ಣುಮಕ್ಕಳಿಗೆ ಪೈಪೋಟಿ ನೀಡಲಾರದೆ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ.
ಭಾರತೀಯ ಮಹಿಳಾ ಸಮುದಾಯ ಒಂದೇ ಅಲ್ಲ. ಇಲ್ಲಿ ನೂರಾರು ಜಾತಿ, ಪಂಗಡ, ಧರ್ಮ, ಭಾಷೆ, ಪ್ರದೇಶಗಳಿವೆ ಇನ್ನು ಎಷ್ಟೋ ಬಗೆಯ ವ್ಯತ್ಯಾಸಗಳಿವೆ. ಹಾಗಾಗಿಯೇ ಎಲ್ಲಾ ಮಹಿಳೆಯರ ಆಸಕ್ತಿ ಅಗತ್ಯ ಸಂಕಟಗಳು ಒಂದೇ ಆಗಿಲ್ಲ. ಇಂತಹ ವೈವಿಧ್ಯಮಯ ಸ್ತ್ರೀ ಬದುಕನ್ನು ಜಾತಿ ಗಣತಿ ಹೊಕ್ಕು ಪ್ರತಿ ಜಾತಿ, ಸಮುದಾಯದ ಹೆಣ್ಣುಮಕ್ಕಳ ಭಿನ್ನ ಸಂಕಟದ ನೆಲೆಗಳನ್ನು ಹೊರೆಗೆಳೆಯುವ ಮೂಲಕ ಅದಕ್ಕನುಗುಣವಾದ ಕಾರ್ಯ ಯೋಜನೆಗಳನ್ನು ರೂಪಿಸುವ ಮತ್ತು ಯಶಸ್ವಿಯಾಗಿ ಅನುಷ್ಟಾನಗೊಳಿಸುವ ಮೂಲಕ ಈ ನೆಲದ ಹೆಣ್ಣು ಮಕ್ಕಳ ಸಂಕಟ ಕೊನೆಗೊಳ್ಳುವಂತಾಗಲಿ.

ಡಾ ಆಶಾರಾಣಿ ಕೆ. ಬಗ್ಗನಡು
ತುಮಕೂರಿನವರು. ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕಿ.