ಬಡ ವ್ಯಾಪಾರಿಯೊಬ್ಬರು ಮಾರಾಟ ಮಾಡಲು ತಂದಿರಿಸಿದ್ದ ಸುಮಾರು 800 ಎಳನೀರು ರಾತ್ರೋರಾತ್ರಿ ಕಳ್ಳತನವಾಗಿರುವ ಘಟನೆ ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿ ನಡೆದಿದೆ.
“ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪುನೀತ್ ಎಳನೀರು ಕಳೆದುಕೊಂಡ ವ್ಯಾಪಾರಿ. ಇವರು ನ್ಯಾಯಾಂಗ ಬಡಾವಣೆಯಲ್ಲಿ ಸುಮಾರು 12 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದಾರೆ. ಇವರ ತಾಯಿ ಮಧುಮೇಹ ಮತ್ತು ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರ ಜತೆಗೆ ಅವರು ಮನೆ ಕೆಲಸ ಸಹ ಮಾಡಬೇಕು. ಇವರ ಕುಟುಂಬ ಈಗ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇದರ ಜತೆಗೆ ಇದೀಗ ಎಳನೀರು ಕಳ್ಳತನವಾಗಿರುವುದು ಅವರಿಗೆ ಬರಸಿಡಿಲು ಬಡಿದಂತಾಗಿದೆ” ಎಂದು ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ್ ಹೇಳಿದ್ದಾರೆ.
“ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಗೆ ಸಂತ್ರಸ್ತ ಪುನೀತ್ ಅವರು ದೂರು ನೀಡಿದ್ದಾರೆ. ಆದರೆ, ಈ ಕೃತ್ಯ ನಡೆದು ಒಂದು ವಾರ ಕಳೆದರೂ ಕಳ್ಳರ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ. ಇತ್ತೀಚೆಗೆ ಪೊಲೀಸರು ನ್ಯಾಯಾಂಗ ಬಡಾವಣೆಯ 8ನೇ ಅಡ್ಡರಸ್ತೆ ಮತ್ತು 3ನೇ ಅಡ್ಡರಸ್ತೆ ಸೇರುವ ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಆದರೂ ಈ ಕೃತ್ಯ ಬಯಲಿಗೆಳೆಯುವುದು ಪೊಲೀಸರಿಗೆ ಸವಾಲು ಎಸೆಯುವಂತೆ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಪಿಂಚಣಿದಾರರ ಮನೆ ಬಾಗಿಲಿನಲ್ಲಿ ಡಿಜಿಟಲ್ ಲೈಫ್ ಪ್ರಮಾಣಪತ್ರ ಸಲ್ಲಿಸಲು ವ್ಯವಸ್ಥೆ
“ಇನ್ನು ಸಂತ್ರಸ್ತ ಪುನೀತ್ ಎಳನೀರು ಕಳೆದುಕೊಂಡು ಆರ್ಥಿಕ ಮುಗ್ಗಟ್ಟಿನಲ್ಲಿ ಬಿದ್ದಿದ್ದಾನೆ. ಪುನೀತ್ ಪಕ್ಕದ ಮನೆಯವರು ಹಾಕಿದ ಸಿಸಿ ಕ್ಯಾಮೆರಾದ ಫುಟೇಜ್‌ಗಳನ್ನು ಪೆನ್ ಡ್ರೈವ್‌ನಲ್ಲಿ ಹಾಕಿ ಪೊಲೀಸರಿಗೆ ಕೊಟ್ಟಿದ್ದಾರೆ. ಆದರೆ, ಪೊಲೀಸರು ಸಂತ್ರಸ್ತನಿಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಇತ್ತ ಜೀವನ ನಿರ್ವಹಣೆಯ ನಡುವೆ ಪೊಲೀಸ್ ಠಾಣೆಗೆ ಪದೇಪದೇ ಅಲೆದು ಸುಸ್ತಾಗಿದ್ದೇನೆ ಎಂದು ಸಂತ್ರಸ್ತ ಹೇಳಿದ್ದಾನೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಬಡ ಕುಟುಂಬಕ್ಕೆ ಸಹಾಯ ಮಾಡುತ್ತಾರೆ ಎಂಬ ಭರವಸೆ ಇದೆ ಎಂಬುದು ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ್ ಅವರ ಅಭಿಪ್ರಾಯವಾಗಿದೆ.