ಸಾರ್ವಜನಿಕ ನಲ್ಲಿ ನೀರು ಕುಡಿದ ಕಾರಣಕ್ಕಾಗಿ ದಲಿತ ಸಮುದಾಯದ ಯುವಕನೊಬ್ಬನನ್ನು ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಕಮಲೇಶ್ ಎಂದು ಗುರುತಿಸಲಾಗಿದೆ. ಬದೌನ್ ಜಿಲ್ಲೆಯ ಉಸಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾತ್ರಾ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
ನ.23ರಂದು ನಲ್ಲಿಯಿಂದ ನೀರು ಕುಡಿದಿದ್ದಕ್ಕಾಗಿ ಸೂರಜ್ ರಾಥೋಡ್ ಮತ್ತು ಆತನ ಸಹಚರರು ಕಮಲೇಶ್ ಅವರಿಗೆ ಬಡಿಗೆಗಳಿಂದ ಥಳಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕಮಲೇಶ್‌ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನ.24 ರಂದು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕಿಶೋರ್ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್‌ನಲ್ಲಿ ಪ್ರಕರಣ ಹಿಂಪಡೆಯದ ದಲಿತ ಮಹಿಳೆಯ ಹತ್ಯೆ; ಮಧ್ಯ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ
ಮೃತನ ತಂದೆ ಜಗದೀಶ್ ಅವರು ನೀಡಿದ ದೂರಿನಂತೆ ಆರೋಪಿ ಸೂರಜ್ ರಾಥೋಡ್‌ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ
ಕೆಲದಿನಗಳ ಹಿಂದೆಯಷ್ಟೇ ಉತ್ತರಪ್ರದೇಶದ ಮೀರತ್‌ನಲ್ಲಿ 12ನೇ ತರಗತಿ ವಿದ್ಯಾರ್ಥಿಯ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಮುಖಕ್ಕೆ ಮೂತ್ರ ವಿಸರ್ಜನೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ನವೆಂಬರ್ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಯುವಕನನ್ನು 6 ಮಂದಿ ಆರೋಪಿಗಳು 4 ಗಂಟೆಗಳ ಕಾಲ ಥಳಿಸಿದ್ದು, ನೀರು ಕೇಳಿದಾಗ ಆತನ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.