ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತತೆ ಕಾಪಾಡಲು ಸುವರ್ಣಸೌಧದ ಸುತ್ತಲಿನ ಪ್ರದೇಶದಲ್ಲಿ ಡಿ.1ರಿಂದ 30ರವರೆಗೆ 144 ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹಿರೇಬಾಗೆವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸುವರ್ಣ ವಿಧಾನ ಸೌಧ, ವಿಧಾನ ಸೌಧದದ ಪೂರ್ವದ ಕಡೆಗೆ 500 ಮೀಟರ್ ಅಂತರ, ಉತ್ತರಕ್ಕೆ ಸುವರ್ಣ ಗಾರ್ಡನ್ ಕಲ್ಯಾಣ ಮಂಟಪದವರೆಗೆ 500 ಮೀಟರ್, ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿಯ ಆಚೆಗೆ ಇರುವ ಸಂಪೂರ್ಣ ಗಾರ್ಡನ್ ಹೊಟೇಲ್‌ವರೆಗೆ 500 ಮೀಟರ್ ಅಂತರ ಹಾಗೂ ದಕ್ಷಿಣ ದಿಕ್ಕಿನ ಕಡೆಗೆ ಟೊಯೊಟಾ ಶೋರೂಮ್‌ವರೆಗೆ 500 ಮೀಟರ್ ಅಂತರದಲ್ಲಿ ಡಿ.1ರಿಂದ 30ರವರೆಗೆ ಈ ನಿಷೇಧಾಜ್ಞೆ ಇರಲಿದೆ.
ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ, ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಅಪಾಯ ಉಂಟು ಮಾಡಬಹುದಾದ ಯಾವುದೇ ವಸ್ತು, ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರಪದಾರ್ಥ(ಸ್ಪೋಟ್ ಗೊಳ್ಳಬಹುದಾದ ಅಥವಾ ಬೆಂಕಿಕಾರಕ ಪದಾರ್ಥಗಳು), ಪಟಾಕಿ ಇಲ್ಲವೆ ಸ್ಪೋಟಕ ವಸ್ತುಗಳು ಯಾವುದೇ ದಹಿಸಬಲ್ಲ ವಸ್ತುಗಳು ಇತ್ಯಾದಿಗಳನ್ನು ಈ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಭಾಷಣ, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಲಾಗಿದೆ.
ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕು.
ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದು, ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ತಡೆ ಒಡ್ಡಿ ಹೆದ್ದಾರಿಯಲ್ಲಿ ಒಡಾಡುತ್ತಿರುವ ಅವಶ್ಯಕ ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್ ಹಾಗೂ ಇತರ ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ತಡೆದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ರಾಮಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.