ಕನ್ನಡ ಸಾಹಿತ್ಯ ಪರಿಷತ್ತಿಗೆ ರಾಜ್ಯ ಸರ್ಕಾರದಿಂದ ಅನುದಾನ ಸಿಗುವುದು ವಿಳಂಬವಾಗಿದ್ದು, ಇದರ ಪರಿಣಾಮ ಮಂಡ್ಯದಲ್ಲಿ ಈ ವರ್ಷ ನಡೆಯಬೇಕಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ₹5 ಕೋಟಿ ಅನುದಾನ ಘೋಷಿಸಿದೆ. ಅದರಲ್ಲಿ ನವೆಂಬರ್ 2ರಂದು ಮೊದಲ ಕಂತು ₹1.67 ಕೋಟಿ ಬಂದಿದೆ. ಇದರಲ್ಲಿ ಪರಿಷತ್ತಿನ ಸಿಬ್ಬಂದಿ ವೇತನ, ನಿರ್ವಹಣೆಗೆ ವೆಚ್ಚ ಮಾಡಬೇಕಿದೆ. ಎರಡನೇ ಕಂತಿನ ಅನುದಾನ ಬಂದ ಬಳಿಕವೇ ಉಳಿದ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ.
“2021-22ರ ಸಾಲಿನಲ್ಲಿ ₹10 ಕೋಟಿ ಅನುದಾನ ನೀಡಲಾಗಿತ್ತು. ಅದರಲ್ಲಿ ₹5 ಕೋಟಿ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳಸಲಾಯಿತು. ಆದರೆ, 2023-24ನೇ ಸಾಲಿನಲ್ಲಿ ಅರ್ಧದಷ್ಟು ಅಂದರೆ; ₹5 ಕೋಟಿ ಮಾತ್ರ ನೀಡಲಾಗಿದೆ. ಹೀಗಾಗಿ, ಈ ವರ್ಷ ಮಂಡ್ಯದ ಸಮ್ಮೇಳನ ಮಾಡದಿರಲು ನಿರ್ಧರಿಸಲಾಗಿದೆ” ಎಂದು ಪರಿಷತ್ತಿನ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
₹5 ಕೋಟಿ ಅನುದಾನ ನಾಲ್ಕು ಕಂತುಗಳಲ್ಲಿ ಬರಬೇಕಿದೆ. ಜೂನ್‌ನಲ್ಲಿ ಮೊದಲ ಕಂತು, ಆಗಸ್ಟ್‌ನಲ್ಲಿ ಎರಡನೇ, ನವೆಂಬರ್‌ಗೆ ಮೂರು ಹಾಗೂ ಫೆಬ್ರವರಿಗೆ ನಾಲ್ಕನೇ ಕಂತಿನ ಹಣ ಬರಬೇಕು. ಎರಡನೇ ಮತ್ತು ಮೂರನೇ ಕಂತಿನ ಹಣ ಶೀಘ್ರ ನೀಡಲು ಕೋರಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಕಡೆ ಬರ ಬಿದ್ದಿದೆ. ರೈತರ ಮನೆಯಲ್ಲಿ ಅನ್ನವಿಲ್ಲ. ಇಂಥ ಸಂದರ್ಭದಲ್ಲಿ ಸಾಹಿತ್ಯದ ಹೋಳಿಗೆ ಸವಿಯಬಾರದು ಎಂಬ ಕಾರಣಕ್ಕೆ ಸ್ವಯಂ ಪ್ರೇರಿತವಾಗಿ ತಾತ್ಕಾಲಿಕವಾಗಿ ಸಮ್ಮೇಳನ ನಿಲ್ಲಿಸಿದ್ದೇವೆ. ಜಾನುವಾರುಗಳ ಮೇವಿಗಾಗಿ ಪರದಾಡುವ ಸ್ಥಿತಿ ಇದೆ. ಪರಿಷತ್ತು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇದನ್ನು ಇನ್ನಷ್ಟು ಜನಪರ ಮಾಡುವ ಉದ್ದೇಶದಿಂದ ಹೀಗೆ ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.