ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 4ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುನ್ನ ಕರ್ನಾಟಕ ರಕ್ಷಣಾ ವೇದಿಕೆ (ಕರವೇ-ನಾರಾಯಣಗೌಡ ಬಣ) ಬೆಳಗಾವಿಯಲ್ಲಿ ಸದ್ದು ಮಾಡುತ್ತಿದೆ. ನಗರದಲ್ಲಿ ಹಾಕಲಾಗಿರುವ ಕನ್ನಡೇತರ ಬ್ಯಾನರ್‌ಗಳನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದ್ದಾರೆ.
ನಗರದ ನಾನಾ ಬಡಾವಣೆಗಳಲ್ಲಿ ಹಾಕಲಾಗಿದ್ದ ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆಗಳ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹರಿದು ಹಾಕಿರುವ ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕನ್ನಡವಿಲ್ಲದೆ ಬರೀ ಇಂಗ್ಲಿಷ್ ಭಾಷೆಯಲ್ಲೇ ಜಾಹಿರಾತು ಸೇರಿದಂತೆ ವಿವಿಧ ಬ್ಯಾನರ್‌ಗಳನ್ನು ಹಾಕಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ, ಎಂಇಎಸ್ ಮಹಾವೇಳವನ್ನು ತಡೆಯುವಂತೆ ಒತ್ತಾಯಿಸಿದ್ದಾರೆ.
ಕರವೇ ಕಾರ್ಯಕರ್ತರು ಜಾಹೀರಾತು ಫಲಕಗಳನ್ನು ಹರಿಯುವ ವೇಳೆ, ಅವರನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಕರವೇ ಕಾರ್ಯಕರ್ತರು ತಂದಿದ್ದ ಮಸಿ ಮತ್ತು ಕಪ್ಪು ಬಣ್ಣದ ಬಾಟಲಿಗಳನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.