ವಿಧಾನಸಭಾ ಚುನಾವಣೆಗೆ 15 ದಿನಗಳು ಇದ್ದ ಸಂದರ್ಭ ಹಿಂದಿನ ಬಿಜೆಪಿ ಸರ್ಕಾರ ಮತಗಳಿಕೆಯ ಉದ್ದೇಶದಿಂದ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡಿತ್ತು. ಆದರೆ ಇಂದಿಗೂ ಕೊಡವ ಅಭಿವೃದ್ಧಿ ನಿಗಮ ಕಂಪನಿ ಕಾಯಿದೆ ನಡಿ ನೋಂದಣಿ ಆಗಿಲ್ಲ. ನಿಗಮ ನೋಂದಣಿ ಆಗದಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರೇ ಸ್ವತಃ ಹೇಳಿದ್ದಾರೆ. ಸತ್ಯ ಏನೆಂಬುದು ಅವರ ಬಾಯಿಂದಲೇ ಬಂದಿದೆ ಎಂದು ಶಾಸಕ ಎ ಎಸ್ ಪೊನ್ನಣ್ಣ ಹೇಳಿದರು.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನಿಗಮ ಘೋಷಣೆ ಆದಲ್ಲಿ ನಿಗಮಕ್ಕೆ ಮುಖ್ಯಸ್ಥರು, ನಿರ್ದೇಶಕರು, ಸಿಬ್ಬಂದಿಗಳು ಇರುತ್ತಾರೆ. ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತು ನಿಗಮಕ್ಕೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಸಂಸದರು ಹೇಳುವಂತೆ ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವಿದೆ ಎಂದಾದರೇ ಅದು ನಿಗಮಕ್ಕೆ ಸೇರಿದ್ದಲ್ಲ ಎಂದಾಯಿತಲ್ಲ” ಎಂದು ಎ ಎಸ್ ಪೊನ್ನಣ್ಣ ಹೇಳಿದರು.
“ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣ 2018ರಲ್ಲಿ ಜಿಲ್ಲೆಯ ಅಭಿವೃದ್ದಿಗೆಂದು ಬಿಡುಗಡೆಯಾದ ಹಣ. ಇದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಹಿನ್ನೆಲೆಯಲ್ಲಿ ಹಣ ಡಿಸಿ ಖಾತೆಯಲ್ಲಿ ಹಾಗೇ ಉಳಿದಿದೆ. ಸುಳ್ಳು ಯಾರು ಹೇಳುತ್ತಿದ್ದಾರೆಂದು ಜನರು ತೀರ್ಮಾನ ಮಾಡುತ್ತಾರೆ” ಎಂದರು.
“ಪೊಲೀಸರು ಅವರ ಕೆಲಸವನ್ನು ಮಾಡಲು ಬಿಡಬೇಕು. ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮೇಲೆ ದರ್ಪ ತೋರುವುದಲ್ಲ. ಈ ಹಿಂದೆ ನಡೆದ ಮೊಟ್ಟೆ ಪ್ರಕರಣದಲ್ಲಿ ನಾನು ಸ್ಥಳದಲ್ಲಿ ಇರದಿದ್ದರೂ ನನ್ನ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು, ನಾನಾಗ ಪೊಲೀಸ್ ಠಾಣೆಗೆ ಹೋಗಿದ್ದೇನಾ? ಈ ಕೇಸಿನಲ್ಲಿ ನನ್ನ ವಿರುದ್ಧ ದೂರು ನೀಡಿದ್ದವರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಪೇಸಿಎಂ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಕೇಸು ದಾಖಲಿಸಿ ನಮ್ಮನ್ನು ಬಂಧಿಸಿದ್ದಾಗ ನಾವು ಪೊಲೀಸ್ ಠಾಣೆಗೆ ಹೋಗಿರಲಿಲ್ಲ. ಪೊಲೀಸರು ಅವರ ಕೆಲಸ ಅವರು ಮಾಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ” ಎಂದು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಹಣ ಮಂಜೂರಾತಿಗೆ ಅಧಿಕಾರಿಗಳಿಂದ ಲಂಚ; ಗ್ರಾ.ಪಂ ಕಚೇರಿಯಲ್ಲಿ ದನ ಕಟ್ಟಿ ಪ್ರತಿಭಟನೆ
“ಕೊಡಗು ವಿಶ್ವವಿದ್ಯಾಲಯ ಸ್ಥಾಪಿಸಲಾಗಿದ್ದು, 20 ಕಾಲೇಜುಗಳ ಉಪನ್ಯಾಸಕರಿಗೆ ಕೊಡಲು ಸಂಬಳವೇ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಬದಲಿಗೆ ಅಭಿವೃದ್ಧಿ ರಾಜಕಾರಣ ಮಾಡಲಿ” ಎಂದು ಶಾಸಕ ಎ ಎಸ್ ಪೊನ್ನಣ್ಣ ಹೇಳಿದರು.