ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಭ್ರೂಣ ಲಿಂಗ ಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ನೀಡಿದೆ.
ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ದೂರವಾಣಿ ಮೂಲಕ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಸೂಚಿಸಿರುವುದಾಗಿ ಸಿಎಂ ಕಚೇರಿ ಮಾಹಿತಿ ಹಂಚಿಕೊಂಡಿದೆ.
ಕಳೆದ ವಾರದಿಂದ ರಾಜ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಕೇಸ್ ಭಾರೀ ಸದ್ದು ಮಾಡುತ್ತಿದೆ.
ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಕಡೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದಿದ್ದು, ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಇದುವರೆಗೂ 9 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳು ಮೂರು ವರ್ಷಗಳ ಅವಧಿಯಲ್ಲಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿತ್ತು.
ಮೈಸೂರು, ಮಂಡ್ಯ ಭಾಗದಲ್ಲಿ ನಡೆದಿದ್ದ ಈ ಭೂಣ ಹತ್ಯೆ ಪ್ರಕರಣಗಳು ಸಮಾಜಕ್ಕೆ ದೊಡ್ಡ ಕಳಂಕವಾಗಿದ್ದವು. ಸಾವಿರಕ್ಕೂ ಅಧಿಕ ಭ್ರೂಣಗಳನ್ನು ಕೊಂದಿರುವ ಸಾಧ್ಯತೆ ಇರುವ ಬಗ್ಗೆ ಅನುಮಾನವಿದೆ.
ಸದ್ಯ ಆರಂಭದಲ್ಲಿ ನಡೆದ ತನಿಖೆಯಲ್ಲಿಯೇ ಮೈಸೂರಿನ ಉದಯಗಿರಿ ಆಯುರ್ವೇದಿಕ್ ವೈದ್ಯ ಚಂದನ್ ಮತ್ತು ತಂಡ ಮೂರೇ ತಿಂಗಳಲ್ಲಿ 242 ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಕುರಿತು ಪೊಲೀಸರಿಗೆ ದಾಖಲೆಗಳು ಸಿಕ್ಕಿದ್ದವು. ಈ ಮಹತ್ತರ ದಾಖಲೆ ಬೆನ್ನಲ್ಲೇ ಕಳೆದ ಎರಡು ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಭ್ರೂಣ ಹತ್ಯೆ ನಡೆದಿರುವ ಸಾಧ್ಯತೆಗಳು ನಿಚ್ಚಳವಾಗಿತ್ತು.
ವೈದ್ಯಾಧಿಕಾರಿಗಳು ಅಮಾನತು
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ತಾಲೂಕು ವೈದ್ಯಾಧಿಕಾರಿ ಡಾ. ರಾಜೇಶ್ವರಿ ಮತ್ತು ಈ ಹಿಂದೆ ಮೈಸೂರು ಡಿಹೆಚ್‌ಓ ಆಗಿದ್ದ ಡಾ. ರವಿ ಅವರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು, ಅವರಿಬ್ಬರನ್ನೂ ಅಮಾನತು ಮಾಡುವಂತೆ ಆದೇಶಿಸಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳ ಲೋಪ ದೋಷ ಎದ್ದು ಕಾಣುತ್ತಿದೆ. ಹತ್ಯೆಯ ಜಾಲ ಪತ್ತೆ ಹಚ್ಚಲು ಸೂಕ್ತ ತನಿಖೆ ಅಗತ್ಯವಾಗಿದ್ದು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜವೂ ಕೂಡ ಬದಲಾಗಬೇಕು’ ಎಂದರು.
ಇದಕ್ಕೂ ಮುನ್ನ ಅವರು ಭ್ರೂಣ ಹತ್ಯೆಯ ಕೇಂದ್ರ ಬಿಂದು ಎನಿಸಿದ ಮೈಸೂರಿನ ಮಾತಾ ಆಸ್ಪತ್ರೆ ಬಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಪ್ಪು ಮಾಹಿತಿ ನೀಡಿದ ಮೈಸೂರು ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.