ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳ ಕೊರತೆ ಅಥವಾ ಚಿಕಿತ್ಸೆ ಸರಿ ಇಲ್ಲವೆಂಬ ದೂರುಗಳು ಕೇಳಿಬರುತ್ತವೆ. ಆದರೆ, ಚಿತ್ರದುರ್ಗದ ಜಿಲ್ಲಾಸ್ಪತ್ರೆಯೊಳಗೆ ಮಂಗಗಳ ಕಾಟ ಹೆಚ್ಚಾಗಿದ್ದು ರೋಗಿಗಳು ಹೈರಾಣಾಗಿದ್ದಾರೆ.
ಐತಿಹಾಸಿಕ ಕಲ್ಲಿನ ಕೋಟೆ, ನಲ್ಲಿಕಾಯಿ ಸಿದ್ದಪ್ಪನ ಬೆಟ್ಟ, ಚಂದ್ರವಳ್ಳಿ, ಆಡುಮಲ್ಲೇಶ್ವರ ಕಿರು ಮೃಗಾಲಯ ಆವರಣ ಸಾಮಾನ್ಯವಾಗಿ ಕೋತಿಗಳಿಗೆ ಆಶ್ರಯ ತಾಣಗಳಾಗಿವೆ. ಆಹಾರ, ನೀರು ಸಿಗದ ಸಂದರ್ಭದಲ್ಲಿ ಇವು ನಗರಕ್ಕೆ ಬರುತ್ತವೆ. ಈ ವೇಳೆ ಮನೆಗಳಿಗೆ, ದೇಗುಲಗಳಿಗೆ, ಶಾಲಾ-ಕಾಲೇಜುಗಳ ಬಳಿಯ ಕ್ಯಾಂಟೀನ್‌ಗಳಿಗೆ ನುಗ್ಗುತ್ತಿದ್ದವು. ಆದರೆ, ಕೆಲ ದಿನಗಳಿಂದ ಈ ಮಂಗಗಳು ಜಿಲ್ಲಾಸ್ಪತ್ರೆಗೆ ದಾಂಗುಡಿ ಇಡುತ್ತಿವೆ.
ಕಿಟಕಿ ಮೂಲಕ ಜಿಗಿದು ರೋಗಿಗಳು ಇರುವ ವಾರ್ಡ್‌ಗಳಲ್ಲಿ ಕಾಣುವ ಆಹಾರದ ಪೊಟ್ಟಣಗಳನ್ನು ಹಾಸಿಗೆಯಿಂದ ಹಾಸಿಗೆಗೆ ಹಾರಿ ತೆಗೆದುಕೊಳ್ಳುತ್ತವೆ. ಇದರಿಂದ ರೋಗಿಗಳು ಆತಂಕಕ್ಕೊಳಗಾಗಿದ್ದಾರೆ. ಮಂಗಗಳು ಕಚ್ಚಿದರೆ ಎಂಬ ಭಯ ಇವರನ್ನು ಕಾಡುತ್ತಿದೆ.
ಡ್ರಿಪ್ ಹಾಕಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವವ ಬಳಿ ಬಂದು ನೀರಿನ ಬಾಟಲಿ ಎಂದು ಭಾವಿಸಿ ಮಂಗಗಳು ಅಲುಗಾಡಿಸುತ್ತಿದ್ದು, ರೋಗಿಗಳು ಆತಂಕಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಭದ್ರತೆ ಇಲ್ಲ ಎನ್ನುತ್ತಿದ್ದಾರೆ ರೋಗಿಗಳ ಸಂಬಂಧಿಕರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ನಿರಂತರವಾಗಿ ಈ ರೀತಿಯ ಸಮಸ್ಯೆ ಇಲ್ಲ. ಕಳೆದೆರಡು ದಿನಗಳ ಹಿಂದೆ ಮಂಗ ನುಗ್ಗಿ ಬ್ರೆಡ್ ತೆಗೆದುಕೊಂಡು ಹೋಗಿದೆ. ಒಳಗೆ ನುಗ್ಗದಂತೆ ತಡೆಯಲು ಕಿಟಕಿಗಳಿಗೆ ಮೆಶ್ ಹಾಕಿಸಲು ಕ್ರಮ ವಹಿಸಲಾಗುವುದು. ಹೆಚ್ಚಿನ ತೊಂದರೆಯಾದಲ್ಲಿ ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆ, ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಲಾಗುವುದು ಎಂದಿದ್ದಾರೆ.