ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಬೆಂಗಳೂರು ಟೆಕ್ ಸಮ್ಮಿಟ್‌ನ ನೀಡಿರುವ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ, ‘ಸರ್ಕಾರದಿಂದ ಜನರಿಗೆ ಯಾವುದನ್ನೂ ಉಚಿತವಾಗಿ ನೀಡಬಾರದೆಂಬ ಮನೋಪ್ರವೃತ್ತಿಯೇ ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು’ ಎಂದು ಹೇಳಿದ್ದಾರೆ.
ಮೈಸೂರು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಳಿತಕ್ಕೊಳಗಾದ ಜನರನ್ನು ಮೇಲೆತ್ತುವುದು ಸಂವಿಧಾನದ ಮೂಲ ಉದ್ದೇಶ. ಸಮಸಮಾಜವನ್ನು ನಿರ್ಮಾಣ ಮಾಡುವುದೇ ಅದರ ಪ್ರಮುಖ ಆದ್ಯತೆ. ಹೀಗಾಗಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಹೇಳಿರುವುದು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಬಡತನ ನಿರ್ಮೂಲನೆಗೆ ವಿರುದ್ಧವಾದದ್ದು’ ಎಂದು ಹೇಳಿದರು.
“ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ನಾಡಿನ 1.32 ಲಕ್ಷ ಕುಟುಂಬಗಳು ಸ್ವಾವಲಂಬಿ ಜೀವನದ ಕಡೆಗೆ ಹೆಜ್ಜೆ ಹಾಕುತ್ತಿವೆ. ಅವರು ಈ ಮಾತನ್ನು ಪ್ರಧಾನಮಂತ್ರಿ ನರೆಂದ್ರ ಮೋದಿ ಅವರು ಕೆಲವೇ ಕೈಗಾರಿಕೋದ್ಯಮಗಳ ಸಾಲವನ್ನು ಮನ್ನಾ ಮಾಡಿದ ಸಂದರ್ಭದಲ್ಲಿ ಹೇಳಬೇಕಿತ್ತು” ಎಂದರು.
“ಸಾಲ ಮನ್ನಾ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಹಾಗೂ ವ್ಯವಸಾಯಕ್ಕೆ ಬಳಸಿ, ದೇಶದ ಬಡತನ ನಿವಾರಣೆಗೊಳಿಸಿ ಸಮಸಮಾಜ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದ್ದರೆ, ನಾರಾಯಣ ಮೂರ್ತಿ ಅವರನ್ನು ಪ್ರಶಂಸೆ ಮಾಡಿ, ಅವರು ದೇಶದ ಸಂವಿಧಾನದ ಆಶಯಕ್ಕೆ ಅನುಗುಣವಾಗಿದ್ದಾರೆಂದು ಹೇಳಬಹುದಿತ್ತು. ಆದರೆ ಈ ರೀತಿಯಾಗಿ ಬಡವರ ಏಳಿಗೆಯ ಪರವಾಗಿರುವ ಸೌಲಭ್ಯಗಳನ್ನು ಅಣಕಿಸಬಾರದು” ಎಂದು ಹೇಳಿದರು.
“ದೇಶದ ಎಲ್ಲ ಜನರಿಗೆ ಸಂಪನ್ಮೂಲವನ್ನು ಹಂಚಬೇಕೆಂದು ನಮ್ಮ ಸಂವಿಧಾನ ಹೇಳಿದೆ. ಯಾರೋ ನಾಲ್ಕು ಜನರು ಸಂಪನ್ಮೂಲ ಕೂಡಿಟ್ಟುಕೊಂಡರೆ ಉಳಿದವರ ಏನು ಮಾಡಬೇಕು. ಗ್ರಾಮೀಣ ಭಾಗದ ಜನರು ಹಾಗೂ ಶತಮಾನಗಳಿಂದ ತುಳಿತಕ್ಕೊಳಗಾದವರ ಗತಿ ಏನಾಗಬೇಕು. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸ್ಥಿತಿಗತಿಗಳು ಏನಾಗಬೇಕು. ಹೀಗಾಗಿ ಯಾರೋ ಒಬ್ಬರು ವಿರೋಧಿಸಿದ್ದಾರೆಂದು ಸಂವಿಧಾನದ ಆಶಯಗಳನ್ನು ಕಡೆಗಣಿಸಲಾಗದು” ಎಂದರು.
“ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಬಹುತೇಕ ಕಾಂಗ್ರೆಸ್ ಪರವಾಗಿ ಇದೆ. ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಬರೀ ಪೊಳ್ಳು ಮಾತು, ಸುಳ್ಳು ಭರವಸೆಗಳ ವ್ಯಾಪಕ ಪ್ರಚಾರ ಬಿಟ್ಟರೆ ತಳಹಂತದಲ್ಲಿ ಏನೂ ಬದಲಾವಣೆ ಆಗಿಲ್ಲ. ಬದಲಾಗಿ ಅವರು ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಿದರು. ನೋಟು ಅಮಾನ್ಯೀಕರಣಗೊಳಿಸಿದರು. ಭಾವನಾತ್ಮಕ ವಿಷಯಗಳನ್ನು ಮುಂದೆ ತಂದರು. ಇವುಗಳಿಂದ ದಲಿತರ ಮೇಲಿನ ದೌರ್ಜನ್ಯವೇನೂ ಕಡಿಮೆಯಾಗಿಲ್ಲ. ರೂಪಾಯಿ ಮೌಲ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಳಿದಿಲ್ಲ. ಜನರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ” ಎಂದು ಹೇಳಿದರು.
“ಜನರಿಗೆ ಬೇಕಿರುವುದು ಬಡತನ ಹಾಗೂ ಹಸಿವು ನಿವಾರಣೆ. ಅವರ ಬದುಕು ಕಟ್ಟಬೇಕು. ಗೌರವಯುತವಾಗಿ ಜೀವನ ನಡೆಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು. ಆದರೆ, ಬಿಜೆಪಿ ಆಡಳಿತದಲ್ಲಿ ಇದಾವುದನ್ನೂ ಕಾಣಲು ಸಾಧ್ಯವಾಗಲಿಲ್ಲ. ಅವರ ಆಡಳಿತ ವೈಫಲ್ಯವನ್ನು ಕಂಡು ಎಲ್ಲದರಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜನರು ಕಾಂಗ್ರೆಸ್ ಪರವಾಗಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಹೆಣ್ಣು ಭ್ರೂಣಹತ್ಯೆ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ಒಳಪಡಿಸಿದೆ. ಕಾನೂನನ್ನು ಮೀರಿ ಈ ರೀತಿಯಾಗಿ ಭ್ರೂಣಹತ್ಯೆ ಮಾಡುವುದು ಅಕ್ರಮ ಹಾಗೂ ಅಪರಾಧ. ಈ ಅಪರಾಧ ಮಾಡಿದವರು ಖಂಡಿತ ಶಿಕ್ಷೆ ಅನುಭವಿಸಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಸಮಿತಿ ರಚಿಸಿ ಎಲ್ಲ ಕ್ಲಿನಿಕ್‌ಗಳನ್ನು ಪ್ರತಿಯೊಂದು ಹಂತದಲ್ಲೂ ತನಿಖೆಗೆ ಒಳಪಡಿಸಿ ವರದಿ ಬಂದ ಕೂಡಲೇ ಸೂಕ್ತ ಕ್ರಮವಹಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ” ಎಂದು ತಿಳಿಸಿದರು.