ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸುವಂತೆ ಯುವಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ಎರಡು ದಿನ ವಿಶೇಷ ನೋಂದಣಿ ಅಭಿಯಾನ ಆರಂಭಿಸಿದೆ.
ಅಭಿಯಾನವು ಡಿಸೆಂಬರ್ 2 ಮತ್ತು 3ರಂದು ನಡೆಯಲಿದೆ. ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಭಿಯಾನ ನಡೆಯಲಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಅ.27 ರಂದು ಬೆಂಗಳೂರು ಚುನಾವಣಾಧಿಕಾರಿಗಳು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಆ ಬಗ್ಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.9 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ನೋಂದಣಿ ಅಭಿಯಾನಗಳನ್ನು ಬಿಬಿಎಂಪಿಯ ಎಲ್ಲ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ವಾರ್ಡ್ ಕಚೇರಿಗಳು, ಮತಗಟ್ಟೆಗಳಲ್ಲಿ ಆಯೋಜಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು, ನೋಂದಣಿ ಮಾಡಿಕೊಳ್ಳುವುದರ ಜತೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಸಹ ಸ್ವೀಕರಿಸಲಿದ್ದಾರೆ.
ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕುರಿತು (ನಮೂನೆ-6: ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು, ನಮೂನೆ-7: ಮತದಾರರ ಪಟ್ಟಿ ಕುರಿತ ಆಕ್ಷೇಪಣೆ ಹಾಗೂ ನಮೂನೆ-8: ಮತದಾರರ ಚೀಟಿಯಲ್ಲಿನ ಬದಲಾವಣೆಗಾಗಿ) ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು ಅಥವಾ voters.eci.gov.in ಅಥವಾ Voter Helpline Mobile App ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವ ಮತದಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ. 2024 ಜನವರಿ 1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ಮತದಾರರು ತಮ್ಮ ಹತ್ತಿರದ ಮತಗಟ್ಟೆಗಳ ಬಳಿ ತೆರಳಿ ಫಾರಂ-6 ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಬಹುದು. ಅಥವಾ voters.eci.gov.in ಅಥವಾ Voter Helpline Mobile App ಮೂಲಕ ಸ್ವಯಂ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶಾಲೆಗಳಿಗೆ ಬಾಂಬ್ ಬೆದರಿಕೆ: 48 ಎಫ್‌ಐಆರ್ ದಾಖಲು
ನಗರದಲ್ಲಿರುವ ಕಾಲೇಜುಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಹೇಳಿದೆ.
“ವಿಶೇಷ ನೋಂದಣಿ ಅಭಿಯಾನದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹೊಸ ಮತದಾರರ ನೋಂದಣಿ ಮಾಡಿಕೊಳ್ಳುತ್ತಾರೆ. ಜತೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ” ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.