ಭ್ರೂಣಹತ್ಯೆಯಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಎಚ್ ಎಸ್ ಬಾಲಾಜಿ ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದು, “ಮೈಸೂರು ಹಾಗೂ ಮಂಡ್ಯ ಪ್ರದೇಶದಲ್ಲಿ ಭ್ರೂಣ ಹತ್ಯೆ ಜಾಲದ ಬಗೆಗಿನ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಜೀವ ಉಳಿಸಬೇಕಾದ ವೈದ್ಯರೇ ಇಂತಹ ಅಮಾನವೀಯ ಕೃತ್ಯಕ್ಕೆ ಕೈ ಹಾಕಿದ್ದು ಮನುಕುಲವೇ ತಲೆ ತಗ್ಗಿಸುವಂತಾಗಿದೆ” ಎಂದರು.
“ತಕ್ಷಣದ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ ಮಾಡಲಾಗಿದ್ದು, ಆರೋಪಿಗಳೇ ಒಪ್ಪಿಕೊಂಡಂತೆ ಎರಡು ವರ್ಷಗಳಿಂದ ಭ್ರೂಣಹತ್ಯೆ ಪ್ರಕರಣ ಮಾಡುತ್ತಿದ್ದಾರೆ. ಇದರ ಲೆಕ್ಕದಂತೆ ಒಂದು ವರ್ಷಕ್ಕೆ ಕನಿಷ್ಠ 1,000 ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಎರಡು ವರ್ಷಕ್ಕೆ 2,000 ಭ್ರೂಣ ಹತ್ಯೆ ಮಾಡಿರಬಹುದು” ಎಂದು ಶಂಕೆ ವ್ಯಕ್ತಪಡಿಸಿದರು.
“ಪೊಲೀಸರ ತನಿಖೆಯಲ್ಲಿ ಮೂರು ವರ್ಷದಿಂದ ಕೃತ್ಯವೆಸಗಿರುವುದು ಗೊತ್ತಾಗಿದೆ. ಅಲ್ಲಿಗೆ 3,000ದಷ್ಟು ಭ್ರೂಣ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿರುವುದು ಆತಂಕಕ್ಕೀಡಾಗುವಂತೆ ಮಾಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ
“ವೈದ್ಯರು ತಮ್ಮ ವೃತ್ತಿ ಧರ್ಮ ಮರೆಯದೇ ನೈತಿಕ ಮೌಲ್ಯ ಉಳಿಸಿಕೊಳ್ಳಬೇಕು. ಭ್ರೂಣಹತ್ಯೆಯಿಂದ ಉಂಟಾಗಬಹುದಾದ ಸಮಸ್ಯೆ ಹಾಗೂ ಸಾಮಾಜಿಕ ಅಸಮತೋಲನದ ಬಗ್ಗೆ ಅರಿವು ಮೂಡಿಸಿದಲ್ಲಿ ಮಾತ್ರ ಈ ಪಿಡುಗು ನಿವಾರಣೆ ಮಾಡಲು ಸಾಧ್ಯ” ಎಂದು ಬಾಲಾಜಿ ಹೇಳಿದ್ದಾರೆ.