- ಸಾಮಾಜಿಕ ನ್ಯಾಯದ ಬಗ್ಗೆ ವಿ ಪಿ ಸಿಂಗ್ ಅವರಿಗಿದ್ದ ಬದ್ಧತೆ ಮಂಡಲ್ ವರದಿ ಜಾರಿಗೆ ಕಾರಣ
- ಸಮಾಜದ ನಿಜ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಜಾತಿ ಗಣತಿ ಅನುಕೂಲ
“ಮಾಜಿ ಪ್ರಧಾನಿ ವಿ ಪಿ ಸಿಂಗ್ ಅವರು ಮಂಡಲ್ ಆಯೋಗದ ವರದಿ ಜಾರಿಗೆ ತಂದು, ಅದೇ ಕಾರಣಕ್ಕೆ ಅಧಿಕಾರ ಕಳೆದುಕೊಂಡರೂ ಮಂಡಲ್ ವರದಿಗೆ ತಾರ್ಕಿಕ ಅಂತ್ಯ ಸಿಗಬೇಕು ಎಂಬ ಅವರ ಆಶಯ ಇನ್ನೂ ಈಡೇರಿಲ್ಲ. ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ಸಮರ್ಪಕವಾಗಿ ಜಾರಿಯಾಗಿಲ್ಲ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ” ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ್ ಹೇಳಿದರು.
ಶುಕ್ರವಾರ ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮಂಡಲ್ ವರದಿ ಆಗಿದ್ದೇನು?” ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
“ವಿ ಪಿ ಸಿಂಗ್ ಹಿಂದುಳಿದ ವರ್ಗದವರಲ್ಲದಿದ್ದರೂ ರಾಜ ಮನೆತನಕ್ಕೆ ಸೇರಿದವರಾಗಿದ್ದರೂ ಸಾಮಾಜಿಕ ನ್ಯಾಯ ಕುರಿತ ಅವರ ಬದ್ಧತೆ ಮರೆಯಲಾರದ್ದು. ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಂಡಲ್ ಆಯೋಗದ ವರದಿ ಜಾರಿಗೊಳಿಸುವುದಾಗಿ ಹೇಳಿದ್ದರು. ಅದರಿಂದಾಗಿ ತಾವು ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರಿಗೆ ಅರಿವಿತ್ತು. ಆದರೆ ನಾನು ಮಾತು ಕೊಟ್ಟಿದ್ದೇನೆ, ನನಗೆ ಅಧಿಕಾರ ಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದು ಬದ್ಧತೆ ತೋರಿದ್ದರು. ಅದಕ್ಕಾಗಿ ಮನೆಯವರ ವಿರೋಧವನ್ನೂ ಎದುರಿಸಬೇಕಾಗಿ ಬಂತು. ಅಧಿಕಾರವನ್ನೂ ಕಳೆದುಕೊಳ್ಳಬೇಕಾಯಿತು” ಎಂದರು.
“ನಮ್ಮ ಸುತ್ತಮುತ್ತ ಅಸಮಾನತೆ ಇದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸಬೇಕು. ಅದನ್ನೇ ಸಂವಿಧಾನವೂ ಹೇಳಿದೆ. ಸಾಮಾಜಿಕ ನ್ಯಾಯವನ್ನು ವಿರೋಧಿಸುವವರು ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಲು ಬಯಸುವವರು ಸಂವಿಧಾನ ವಿರೋಧಿಗಳು. ನಾನು ಸಂವಿಧಾನ ಹೇಳಿದಂತೆ ನಡೆದುಕೊಂಡಿದ್ದೇನೆ. ನಾನೇನೂ ತಪ್ಪು ಮಾಡಿಲ್ಲ ಎಂದು ಅಧಿಕಾರ ಕಳೆದುಕೊಂಡ ನಂತರ ವಿಪಿ ಸಿಂಗ್ ಹೇಳಿದ್ದರು” ಎಂದು ನೆನಪು ಮಾಡಿಕೊಂಡರು.
“ಮಂಡಲ ಆಯೋಗದ ವರದಿ ತಾರ್ಕಿಕ ಅಂತ್ಯ ಕಾಣಬೇಕು ಎಂದು ಮಾಜಿ ಪ್ರಧಾನಮಂತ್ರಿ ವಿ ಪಿ ಸಿಂಗ್ ಬಯಸಿದ್ದರು. ಆದರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿದ್ದ 27% ಮೀಸಲಾತಿ ಇಂದಿಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಇತ್ತೀಚೆಗೆ ಕೇಂದ್ರದ ಸಚಿವರು ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂಬ ಸುಪ್ರೀಂ ಕೋರ್ಟಿನ ನಿಲುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಜಾತಿ ಸಮೀಕ್ಷೆ, ಜನಗಣತಿ ಮಾಡಿ ದತ್ತಾಂಶ ಇಟ್ಟುಕೊಂಡು ಬನ್ನಿ ಎಂದು ಸುಪ್ರೀಂ ಕೋರ್ಟ್ ಹಲವು ಸಲ ಹೇಳಿದೆ. ಜಾತಿಯ ಅಂಶ ಸೇರಿಸಿ ಜನಗಣತಿ ಮಾಡುವಂತೆ ಕರ್ನಾಟಕ ಸರ್ಕಾರ ಹೇಳಿದ್ದು ಇದೇ ಉದ್ದೇಶದಿಂದ” ಎಂದರು.
“1993ರಲ್ಲಿ 14(4) ಅಡಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ಬಂತು. 2008ರಲ್ಲಿ ಅರ್ಜುನ್ ಸಿಂಗ್ ಅವರು ಸಂವಿಧಾನಕ್ಕೆ 93ನೇ ತಿದ್ದುಪಡಿ ತಂದು ಮಂಡಲ್ ವರದಿ ಜಾರಿಗೆ ತರಬೇಕು ಎಂಬ ತೀರ್ಮಾನ ಮಾಡಿ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂದರೆ, ಐಐಟಿ, ಐಐಎಂ ತರಹದ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಲಾಯಿತು.
ಇದನ್ನೂ ಓದಿ ಸಿದ್ದರಾಮಯ್ಯ ಅವರಿಗೆ ಹಿಂದಿನಷ್ಟು ಸ್ವಾತಂತ್ರ್ಯ ಈಗ ಇಲ್ಲ- ಎಚ್ ಆಂಜನೇಯ
1937ರ ನಂತರ ಜಾತಿಗೆ ಸಂಬಂಧಿಸಿದ ಅಂಕಿ ಅಂಶವೇ ಇಲ್ಲ. ಸಮಾಜದ ನಿಜ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಜಾತಿ ಗಣತಿ ಅನುಕೂಲ. ಜಾತಿ ಎಣಿಸಿಕೊಳ್ಳಲು ಹೋಗಿ ಜಾತಿಯ ಸಮಾಜ ಕಟ್ಟಲಾಗುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ಧಾರೆ. ಜಾತಿಯನ್ನೇ ಪರಿಗಣಿಸಿ ಗಣತಿ ಮಾಡುವುದು, ಮೀಸಲಾತಿ ಕೊಡುವುದು ತಪ್ಪು ಎಂದು ನಾನೂ ಹೇಳುತ್ತೇನೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯ ಅವರು ಕೂಡಾ ಇದನ್ನೇ ಹೇಳಿದ್ದರು. ಎಲ್ಲಾ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ರಾಜಕೀಯ ಸ್ಥಿತಿ ಗಮನಿಸಿ ಮೀಸಲಾತಿಗೆ ಕೈ ಹಾಕಬೇಕು ಎಂದಿದ್ದರು” ಎಂದು ಹೇಳಿದರು.
ಸಮಾರಂಭದಲ್ಲಿ ಎಚ್ ಕಾಂತರಾಜ್, ಪತ್ರಕರ್ತರಾದ ಎಂ ಸಿದ್ದರಾಜು, ಲಕ್ಷ್ಮಣ ಕೊಡಸೆ, ಗಂಗಾಧರ ಮೊದಲಿಯಾರ್, ಕೆ ವಿ ಪ್ರಭಾಕರ, ಬಿ ಕೆ ರವಿ ಅವರಿಗೆ ವಿಪಿ ಸಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಎಚ್ ಎಂ ರೇವಣ್ಣ, ಮಾಜಿ ಸಭಾಪತಿ ವಿ ಆರ್ ಸುದರ್ಶನ್, ಮಾಜಿ ಸಚಿವ ಎಚ್ ಆಂಜನೇಯ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಕೆ. ಆರ್ ನೀಲಕಂಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.