ತಮಿಳುನಾಡಿನ ದಿಂಡಿಗಲ್‌ನಲ್ಲಿ ಪ್ರಕರಣ ಮುಚ್ಚಿಸುವುದಾಗಿ ಬೆದರಿಸಿ, ವೈದ್ಯನೋರ್ವನಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಜಾರಿ ನಿರ್ದೇಶನಾಲಯ (ಈ.ಡಿ) ಅಧಿಕಾರಿಯೊಬ್ಬ ‘ರೆಡ್‌ಹ್ಯಾಂಡ್’ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಈ ಬೆಳವಣಿಗೆ ಸದ್ಯ ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಈ.ಡಿ ಅಧಿಕಾರಿಯನ್ನು ಬಂಧಿಸಿದೆ. ದಿಂಡಿಗಲ್-ಮಧುರೈ ಹೆದ್ದಾರಿಯಲ್ಲಿ ಎಂಟು ಕಿಲೋಮೀಟರ್ ಬೆನ್ನಟ್ಟಿದ ನಂತರ ಈಡಿ ಅಧಿಕಾರಿಯನ್ನು ಲಂಚದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.
#WATCH | Tamil Nadu | ED officer Ankit Tiwari taken from the DVAC office to be produced before a judicial magistrate in Dindigul.
He was caught red-handed while accepting a bribe of Rs 20 lakhs from a doctor in Dindigul. He along with his team of ED officers had been… pic.twitter.com/F8JTReQnQq
— ANI (@ANI) December 1, 2023
ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ದಿಂಡಿಗಲ್‌ನಲ್ಲಿ ಬಂಧಿಸಲ್ಪಟ್ಟ ನಂತರ, ಡಿವಿಎಸಿ ಅಧಿಕಾರಿಗಳ ತಂಡವು ಮಧುರೈನ ಉಪ-ಪ್ರಾದೇಶಿಕ ಈಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಬಂಧಿತ ಅಧಿಕಾರಿಯನ್ನು ಅಂಕಿತ್ ತಿವಾರಿ ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿರುವ ಮಧುರೈ ಜಾರಿ ನಿರ್ದೆಶನಾಲಯದ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೆಡ್‌ಹ್ಯಾಂಡಾಗಿ ಸಿಕ್ಕ ಬಳಿಕ ಡಿವಿಎಸಿ ಅಧಿಕಾರಿಗಳು ಅಧಿಕಾರಿಯ ಮನೆ ಮೇಲೂ ದಾಳಿ ನಡೆಸಿದ್ದಾರೆ.
ವಶಕ್ಕೆ ಪಡೆದುಕೊಂಡ ಅಧಿಕಾರಿ ಅಂಕಿತ್ ತಿವಾರಿಯನ್ನು ದಿಂಡಿಗಲ್‌ನ ಮ್ಯಾಜಿಸ್ಟ್ರೇಟ್ ಮುಂದೆ ಶುಕ್ರವಾರ ತಡರಾತ್ರಿಯೇ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಡಿಸೆಂಬರ್ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
Local court in #Dindigul sends 15 days Judicial custody to #EnforcementDirectorate official Ankit Tiwari on bribery charges. pic.twitter.com/kpvu91BFyE
— Suresh Kumar (@journsuresh) December 1, 2023
2016ರ ಬ್ಯಾಚ್‌ನ ಅಧಿಕಾರಿಯಾಗಿರುವ ತಿವಾರಿ, ಈ ಹಿಂದೆ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ ಮಧುರೈನಲ್ಲಿ ನಿಯೋಜನೆಗೊಂಡಿದ್ದರು. ಅಂಕಿತ್ ತಿವಾರಿ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಐದು ವರ್ಷಗಳಿಗೂ ಹೆಚ್ಚು ಕಾಲ ಈಡಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಏಜೆನ್ಸಿಗೆ ಸೇರುವ ಮೊದಲು, ಅವರು ಅಕೌಂಟಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ.
ದಿಂಡಿಗಲ್‌ನಲ್ಲಿ ವೈದ್ಯರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಚ್ಚಿ ಹಾಕುವ ಹೆಸರಿನಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹದ ಅಧಿಕಾರಿಗಳಿಗೆ ವೈದ್ಯರು ದೂರು ನೀಡಿದ್ದರು ಎಂದು ವರದಿಯಾಗಿದೆ. ವೈದ್ಯನಿಂದ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದಾನೆ.
ಇದನ್ನು ಓದಿದ್ದೀರಾ? ‘ಕುದುರೆ ವ್ಯಾಪಾರ’ ಶಂಕೆ: ತೆಲಂಗಾಣಕ್ಕೆ ‘ಟ್ರಬಲ್ ಶೂಟರ್’ ಡಿ ಕೆ ಶಿವಕುಮಾರ್
ಜಾರಿ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿರುವ ಹಲವು ಅಧಿಕಾರಿಗಳು ಇದೇ ರೀತಿಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಹೆಸರಿನಲ್ಲಿ ಹಲವರಿಗೆ ಬೆದರಿಕೆ ಹಾಕಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದ ವೇಳೆಯಲ್ಲೇ ಈ ಬೆಳವಣಿಗೆ ನಡೆದಿರುವುದು ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಡಿಎಂಕೆ ಸಂಸದ ದಯಾನಿಧಿ ಮಾರನ್ ಈಡಿ ಎಂದರೆ “ಸುಲಿಗೆ ಇಲಾಖೆ” ಎಂದು ಕರೆದಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ರಾಜಕೀಯ ವಿರೋಧಿಗಳು ಮತ್ತು ಟೀಕಾಕಾರರನ್ನು ಗುರಿಯಾಗಿಸಲು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
‘ತಿವಾರಿ ಅವರ ಕೃತ್ಯಕ್ಕೆ ಜಾರಿ ನಿರ್ದೇಶನಾಲಯವನ್ನು ದೂಷಿಸಲಾಗುವುದಿಲ್ಲ’ ಎಂದು ಭಾರತೀಯ ಜನತಾ ಪಕ್ಷವು ಸಮರ್ಥಿಸಿಕೊಂಡಿದೆ.