ರಾಜ್ಯಾದ್ಯಂತ ಸುದ್ದಿಯಾಗಿರುವ ಯುವ ವಕೀಲನೋರ್ವನ ಮೇಲೆ ಚಿಕ್ಕಮಗಳೂರಿನ ಪೊಲೀಸರು ನಡೆಸಿದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪೊಲೀಸರು ಅಮಾನತಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಪೊಲೀಸರನ್ನು ಹುಡುಕಲಿಕ್ಕೆಂದೇ ವಿಶೇಷ ಪೊಲೀಸರ ತಂಡವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಚನೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಚಿಕ್ಕಮಗಳೂರು ಎಸ್‌ಪಿ ಡಾ.ವಿಕ್ರಮ್ ಅಮಟೆ, ‘ವಕೀಲ ಪ್ರೀತಮ್ ಎಂಬುವವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಗುರುವಾರ (ನ.30) ಪ್ರಕರಣ ದಾಖಲಾಗಿತ್ತು. ಆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪಿಎಸ್‌ಐ ಸೇರಿದಂತೆ ಆರು ಮಂದಿ ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಚಿಕ್ಕಮಗಳೂರು ಡಿವೈಎಸ್‌ಪಿ ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಇದೇನು ಉಗಾಂಡವೇ?: ಹೈಕೋರ್ಟ್ ಗರಂ
ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಪಿಎಸ್‌ಐ ಸೇರಿದಂತೆ 6 ಪೊಲೀಸ್ ಸಿಬ್ಬಂದಿಗಳ ಬಂಧನಕ್ಕೆ ಆಗ್ರಹಿಸಿದ್ದ ವಕೀಲರು, ರಾಜ್ಯಾದ್ಯಂತ ಕೋರ್ಟ್ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ(ಡಿ.01) ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಠಾಣೆಯಲ್ಲಿ ಕೂಡಿಹಾಕಿ ಯುವ ವಕೀಲನಿಗೆ ಥಳಿತ; ಪಿಎಸ್‌ಐ ಸೇರಿ 6 ಮಂದಿ ಅಮಾನತು
ವಿಚಾರಣೆಯ ವೇಳೆ, ‘ಇದೇನು ಉಂಗಾಡವೇ’ ಎಂದು ಪ್ರಶ್ನಿಸಿದ ಹೈಕೋರ್ಟ್, ‘ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಮೇಲೆ ಪೊಲೀಸರಿಂದ ನಡೆದಿರುವ ಹಲ್ಲೆ ಪ್ರಕರಣ ಈ ಹಿಂದೆ ಉಗಾಂಡದಲ್ಲಿ ನಡೆಯುತ್ತಿದ್ದಂತಹ ಸಂಗತಿಗಳನ್ನು ನೆನಪಿಸಿದೆ. ವಕೀಲರಿಗೆ ಹೀಗಾದರೆ ಸಾಮಾನ್ಯರ ಗತಿಯೇನು? ಪೊಲೀಸರ ನಡೆ ಕಾನೂನಿಗೆ ಬೆದರಿಕೆ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೇ, ಘಟನೆಯ ಸಂಪೂರ್ಣ ವರದಿ ಕೇಳಿದ್ದು, ಮಂಗಳವಾರದ ಒಳಗೆ ತನಿಖೆಯ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ.
ಈ ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹೈಕೋರ್ಟ್‌ನ ಹಿರಿಯ ವಕೀಲ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, “ಭಾರತೀಯ ದಂಡ ಸಂಹಿತೆಯಲ್ಲಿ ಪೊಲೀಸರು ಆರೋಪಿಗಳಾದರೆ ಅವರಿಗೂ ಕೂಡ ಅದೇ ನ್ಯಾಯ ಅನ್ವಯವಾಗುತ್ತದೆ. ಚಿಕ್ಕಮಗಳೂರು ಘಟನೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು ಬಿಟ್ಟರೆ, ಇದುವರೆಗೂ ಬೇರೆ ಯಾವುದೇ ಕಠಿಣ ಕ್ರಮ ಆಗಿಲ್ಲ. ಇದು ನಿಜಕ್ಕೂ ಶೋಚನೀಯ. ಪೊಲೀಸ್‌ನವರಿಗೆ ಬೇರೆಯೇ ದಂಡ ಸಂಹಿತೆ ಇದೆಯೇ? ಎಂದು ನಾವು ಪ್ರಶ್ನಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ತಿಳಿಸಿದರು.
‘ಸಾಮಾನ್ಯ ಜನರ ಮೇಲೆ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಪ್ರಕರಣ ದಾಖಲಾದರೆ, ಪೊಲೀಸರು ತಕ್ಷಣ ಅವರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ವಿರಾಜಮಾನರಾಗಿ ಓಡಾಡಿಕೊಂಡಿದ್ದಾರೆ. ಈ ಅನ್ಯಾಯವನ್ನು ನಾವು ಖಂಡಿಸುತ್ತೇವೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ತಂಡ ರಚಿಸಿ 24 ಗಂಟೆಗಳಾದರೂ ಇನ್ನೂ ಅವರನ್ನು ಬಂಧಿಸಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪ ಹೊತ್ತಿರುವ ಪೊಲೀಸರನ್ನು ರಕ್ಷಣೆ ಮಾಡುತ್ತಿರಬಹುದೇ ಎಂಬ ಅನುಮಾನ ವಕೀಲ ಸಮುದಾಯದವರ ನಡುವೆ ಹುಟ್ಟಿಕೊಂಡಿದೆ. ಪೊಲೀಸ್ ಸ್ಟೇಷನ್ ಒಳಗಡೆ ಆಗಿರುವ ಈ ಘಟನೆಯ ಬಗ್ಗೆ ಹೈಕೋರ್ಟ್ ಕೂಡ ತುಂಬಾ ಕಳವಳ ವ್ಯಕ್ತಪಡಿಸಿದೆ. ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಬಗ್ಗೆಯೂ ನಾವು ಅರ್ಜಿ ಸಲ್ಲಿಸಲಿದ್ದೇವೆ’ ಎಂದು ವಿವೇಕ್ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಹಲ್ಲೆ ಪ್ರಕರಣ: ‘ವಕೀಲರಿಗೆ ಹೀಗಾದರೆ ಸಾಮಾನ್ಯರ ಗತಿಯೇನು?’ ಪೊಲೀಸರ ನಡೆ ಕಾನೂನಿಗೆ ಬೆದರಿಕೆ ಎಂದ ಹೈಕೋರ್ಟ್ #KarnatakaHighCourt #Chikkamagaluru https://t.co/cjkfWEVYgy
— ಬಾರ್ & ಬೆಂಚ್ – Kannada Bar & Bench (@Kbarandbench) December 1, 2023
ಏನಿದು ಘಟನೆ?
ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಚಿಕ್ಕಮಗಳೂರಿನ ಯುವ ವಕೀಲ ಪ್ರೀತಂ ಎಂಬುವವರನ್ನು ಠಾಣೆಯಲ್ಲಿ ಕೂಡಿಹಾಕಿ ಪೊಲೀಸರು ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಕಳೆದ ನ.30ರ ರಾತ್ರಿ ಚಿಕ್ಕಮಗಳೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ ಪಿಎಸ್‌ಐ ಸೇರಿ 6 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಯುವ ವಕೀಲ ಪ್ರೀತಂ ಎಂಬುವವರು ಗುರುವಾರ ರಾತ್ರಿ ಹೆಲ್ಮೆಟ್ ಇಲ್ಲದೆ ಮಾರುಕಟ್ಟೆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಚಿಕ್ಕಮಗಳೂರು ನಗರ ಪೊಲೀಸರು, ಅವರ ಬೈಕ್‌ನಿಂದ ಕೀ ಕಸಿದುಕೊಂಡಿದ್ದಾರೆ. ಬಳಿಕ ಠಾಣೆಯೊಳಗೆ ಕರೆದುಕೊಂಡು ಹೋಗಿ, ಕೂಡಿ ಹಾಕಿದ್ದಲ್ಲದೇ, ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ದೌರ್ಜನ್ಯದಿಂದ ವಕೀಲ ಪ್ರೀತಂ ಅವರ ಎದೆ, ಕೈ ಮತ್ತು ಬೆನ್ನಿಗೆ ಸಾಕಷ್ಟು ಗಾಯಗಳಾಗಿದ್ದು, ಇದು ವಕೀಲ ಸಮೂಹವನ್ನು ಇನ್ನಷ್ಟು ಕೆರಳುವಂತೆ ಮಾಡಿತ್ತು. ರಾತ್ರಿಯಿಡೀ ಠಾಣೆಯ ಎದುರು ಧರಣಿ ನಡೆಸಿ, ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.