ಕಳೆದ ಚುನಾವಣೆ ಮತ್ತು ಸರ್ಕಾರದ ಇತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಒದಗಿಸಿದ್ದ ಟ್ಯಾಕ್ಸಿ ಸೇವೆಗಳಿಗೆ ಹಣ ಬಿಡುಗಡೆ ಮಾಡುವಂತೆ ಕೇಳಲು ಅತ್ತಿಂದತ್ತ ಅಲೆದಾಡುವಂತೆ ಮಾಡಿದ್ದಾರೆ ಎಂದು ಹಲವು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಟ್ಯಾಕ್ಸಿ ಚಾಲಕ ಮತ್ತು ಮ್ಯಾಕ್ಸಿಕ್ಯಾಬ್ ಸಂಘದ ಅಧ್ಯಕ್ಷ ದಿನೇಶ್ ಕುಂಪಲ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜ್ಞಾಪಕ ಪತ್ರ ಸಲ್ಲಿಸಿದ್ದು, “ನಮ್ಮ ಕೆಲವು ಸದಸ್ಯರು ಹಿಂದಿನ ಚುನಾವಣೆಯ ನಂತರ ಸುಮಾರು ಒಂದು ವರ್ಷದ ನಂತರ ಹಣವನ್ನು ಪಡೆದರು. ಇದಲ್ಲದೆ, ಹಲವು ವರ್ಗದ ವಾಹನಗಳಿಗೆ ಸಮರ್ಪಕ ದರವನ್ನು ವೈಜ್ಞಾನಿಕವಾಗಿ ನಿಗದಿಪಡಿಸಿಲ್ಲ. ಅದನ್ನು ಸರ್ಕಾರ ಸರಿಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಟ್ಯಾಕ್ಸಿಗೆ ₹2,700 ಮತ್ತು ಮಿನಿ ಬಸ್‌ಗಳಿಗೆ ದಿನಕ್ಕೆ ₹3,900 ನಿಗದಿಪಡಿಸಿದ್ದಾರೆ. ಇದು ಇಂಧನಕ್ಕೆ ಸಾಕಾಗುವುದಿಲ್ಲ. ಇದಲ್ಲದೆ, ಪಾವತಿ ಬಿಡುಗಡೆಯ ವಿಳಂಬದಿಂದ ಟ್ಯಾಕ್ಸಿ ಚಾಲಕರ ಮೇಲೂ ಪರಿಣಾಮ ಬೀರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಿನಿ ಬಸ್‌ಗಳಿಗೆ ದಿನಕ್ಕೆ ₹6,000, ಇನ್ನೋವಾದಂತಹ ವಾಹನಗಳಿಗೆ ₹4,000, ಇತರೆ ಕಾರುಗಳಿಗೆ ₹3,500 ಮಂಜೂರು ಮಾಡುವಂತೆ ಸಂಘವು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ದರ ನಿಗದಿ
“ಚುನಾವಣೆಗೆ ಸಂಬಂಧಿಸಿದಂತೆ ಹಲವು ರೀತಿಯ ಸೇವೆಗಳಿಗೆ ವಾಹನಗಳ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಮಂಗಳೂರಿನ ಆರ್‌ಟಿಒಗೆ ವಹಿಸಲಾಗಿದೆ. ಆದರೆ, ಚುನಾವಣಾ ಸೇವೆಗೆ ಬಾಡಿಗೆ ಪಡೆದ ಖಾಸಗಿ ವಾಹನಗಳ ಬಿಲ್‌ಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಡಳಿತವು ಬಿಡುಗಡೆ ಮಾಡುತ್ತದೆ” ಎಂದು ಆರ್‌ಟಿಒ ಜಾನ್ ಬಿ ಮಿಸ್ಕ್ವಿತ್ ಹೇಳಿದರು.
“ಚುನಾವಣೆಗೆ ಕನಿಷ್ಠ 10 ದಿನಗಳ ಮೊದಲು ಚುನಾವಣಾ ಕೆಲಸಗಳಿಗೆ ಅಗತ್ಯವಿರುವ ಖಾಸಗಿ ವಾಹನಗಳು ಸೇರಿದಂತೆ ಒಟ್ಟು ವಾಹನಗಳ ಸಂಖ್ಯೆಯ ಬಗ್ಗೆ ನಾವು ಸೂಕ್ತ ಮಾಹಿತಿ ಪಡೆಯುತ್ತೇವೆ. ನಾವು ಈಗಾಗಲೇ ಕೆಲವು ವಾಹನಗಳ ವ್ಯವಸ್ಥೆ ಮಾಡಿದ್ದೇವೆ. ಅವಶ್ಯಕತೆಯ ಆಧಾರದ ಮೇಲೆ ಹೆಚ್ಚಿನ ವ್ಯವಸ್ಥೆ ಒದಗಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಹಿಂಗಾರು ಹಂಗಾಮಿನ ನೀರು ಸ್ಥಗಿತ
“ಚುನಾವಣಾ ಕಾರ್ಯಕ್ಕೆ ಅಗತ್ಯವಿರುವ ವಾಹನಗಳ ಸಂಖ್ಯೆ ಮತ್ತು ವರ್ಗಗಳನ್ನು ಜಿಲ್ಲಾಡಳಿತ ನಿರ್ಧರಿಸುತ್ತದೆ. ನಾವು ವಾಹನಗಳ ವ್ಯವಸ್ಥೆ ಮಾಡುತ್ತೇವೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಖಾಸಗಿ ವಾಹನಗಳಿಗೆ ನೀಡಬೇಕಾದ ಪಾವತಿಯನ್ನು ಜಿಲ್ಲಾಡಳಿತದ ಮೂಲಕ ಇತ್ಯರ್ಥಪಡಿಸಲಾಗುತ್ತದೆ” ಎಂದು ಹೇಳಿದರು.