ಸಿನಿ ರಸಿಕರ ಗಮನ ಸೆಳೆದಿದ್ದ ʼಯುವʼ ಟೈಟಲ್ ಟೀಸರ್
ಯುವ ರಾಜ್‌ಕುಮಾರ್‌ಗೆ ಜೊತೆಯಾದ ಸಪ್ತಮಿ ಗೌಡ
ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವ ರಾಜ್‌ಕುಮಾರ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ʼಯುವʼ ಸಿನಿಮಾದ ಚಿತ್ರೀಕರಣ ಭಾನುವಾರದಿಂದ ಪ್ರಾರಂಭಗೊಂಡಿದೆ.
ʼಯುವʼ ಸಿನಿಮಾದ ಮೂಲಕ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದು, ಮೊದಲ ದಿನದ ಶೂಟಿಂಗ್‌ನಲ್ಲಿ ಭಾಗಿಯಾದ ಫೋಟೋಗಳನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, “ಯುವ ಚಿತ್ರೀಕರಣ ಆರಂಭ” ಎಂದು ಮಾಹಿತಿ ನೀಡಿದ್ದಾರೆ.
ʼಆ್ಯಕ್ಷನ್ ಪ್ಯಾಕ್ʼ ಕಥಾಹಂದರವುಳ್ಳ ಈ ಚಿತ್ರಕ್ಕಾಗಿ ಬೆಂಗಳೂರಿನ ಪೀಣ್ಯ ಬಳಿ ಇರುವ ಹಳೆಯ ʼಎಚ್‌ಎಂಟಿ ಫ್ಯಾಕ್ಟರಿʼ ಅಂಗಳದಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು, ಮೊದಲ ಹಂತದ ಚಿತ್ರೀಕರಣ ಇದೇ ಸೆಟ್‌ನಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚೊಚ್ಚಲ ಚಿತ್ರದಲ್ಲಿ ಯುವ ರಾಜ್‌ಕುಮಾರ್‌ಗೆ ʼಕಾಂತಾರʼ ಖ್ಯಾತಿಯ ನಟಿ ಸಪ್ತಮಿ ಗೌಡ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್‌ವುಡ್‌ನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲಂಸ್ʼ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಹೊಣೆ ಹೊತ್ತುಕೊಂಡಿದ್ದಾರೆ.