ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಪ್ರತಿ ತಿಂಗಳಿಗೆ ತಲಾ ₹10 ಸಾವಿರ ನೀಡಬೇಕು ಎಂದು ನಗರದ ಆಟೋ ರಿಕ್ಷಾ ಚಾಲಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟವು ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಆಟೋ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ಹದಗೆಟ್ಟ ಆರ್ಥಿಕ ಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರು.
ಈಗಾಗಲೇ ಆಟೋ ರಿಕ್ಷಾ ಚಾಲಕರ ಆದಾಯವನ್ನು ಬೈಕ್ ಟ್ಯಾಕ್ಸಿಗಳು ಕಬಳಿಸುತ್ತಿದ್ದು, ಈಗ ಶಕ್ತಿ ಯೋಜನೆ ಜಾರಿಯಿಂದ ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂದು ಆಟೋ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.
ಈ ಸಮಸ್ಯೆಗಳಿಂದಾಗಿ ಅನೇಕ ಚಾಲಕರು ಬಾಡಿಗೆ ಪಾವತಿಸಲು, ಸಾಲವನ್ನು ಮರುಪಾವತಿಸಲು ಮತ್ತು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ ಎಂದು ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಸ್ತೆ ಬದಿ ಒಣಗಿರುವ ಮರ ಹಾಗೂ ರೆಂಬೆ ಕೊಂಬೆ ತೆರವು ಮಾಡಲು ಕರೆ ಮಾಡಿ ಎಂದ ಬಿಬಿಎಂಪಿ
ಈ ಬೇಡಿಕೆಗಳಲ್ಲದೆ, ಅಸಂಘಟಿತ ವಾಣಿಜ್ಯ ಚಾಲಕರಿಗೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಮತ್ತು ಸರ್ಕಾರದ ನಾನಾ ಅಭಿವೃದ್ಧಿ ಮಂಡಳಿಗಳ ಮೂಲಕ 2 ಲಕ್ಷ ರೂ.ವರೆಗೆ ಕಡಿಮೆ ಬಡ್ಡಿದರದ ಸಾಲವನ್ನು ಒದಗಿಸುವಂತೆ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ.
ಒಕ್ಕೂಟದ ಸದಸ್ಯರು ಗುರುವಾರ ಮ್ಯಾಕ್ಸಿ ಕ್ಯಾಬ್ ಮತ್ತು ಟ್ರಕ್ ಚಾಲಕರೊಂದಿಗೆ ಮತ್ತೊಂದು ಸಭೆ ನಡೆಸಲಿದ್ದು, ನಂತರ ಅವರು ತಮ್ಮ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.