ಸೈಟ್ ವಿಚಾರವಾಗಿ ಫೋನ್ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಮುಖಂಡ ತಮ್ಮೇಶ್ ಗೌಡ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುತ್ತಿಗೆದಾರ ದಯಾನಂದ್ ಕುಮಾರ್ ಎಂಬುವವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ತಮ್ಮೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ದೂರಿನಲ್ಲೇನಿದೆ?
ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಅಶ್ವಿನ್ ಎಂಬುವವರಿಗೆ ಸೇರಿದ ಸೈಟ್ ಇದ್ದು, ಈ ಸೈಟ್ ಸುತ್ತಮುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಗುತ್ತಿಗೆದಾರ ದಯಾನಂದ ಎಂಬುವವರಿಗೆ ಸೈಟ್ ಮಾಲೀಕ ಅಶ್ವಿನ್ ಅವರು ಕಾಂಟ್ರ್ಯಾಕ್ಟ್ ನೀಡಿದ್ದರು.
ಅದರಂತೆ ದಯಾನಂದ ಅವರು ಕೆಲಸ ನಡೆಸುವಾಗ ಡಿ. 18ರಂದು ಸುಮಾರು 12 ಗಂಟೆಗೆ ಸೈಟ್ ಬಳಿ ಸತೀಶ್, ಚಂದ್ರಪ್ಪ ಹಾಗೂ ಸಹಚರರು ಬಂದು ಈ ಸೈಟ್ ನಮಗೆ ಸೇರಿದ್ದು ಇಲ್ಲಿ ಕಾಂಪೌಂಡ್ ನಿರ್ಮಾಣ ಮಾಡಬೇಡಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
“ಈ ಬಗ್ಗೆ ನನಗೆ ಏನು ತಿಳಿದಿಲ್ಲ ಸೈಟ್ ಮಾಲೀಕ ಅಶ್ವಿನ್ ಅವರ ಬಳಿ ಈ ಬಗ್ಗೆ ಮಾತಾಡಿಕೊಳ್ಳಿ ಎಂದು ತಿಳಿಸಿದ್ದೇನೆ. ಆದರೂ ಸತೀಶ್ ಎಂಬಾತ ಬಿಜೆಪಿ ಮುಖಂಡ ತಮ್ಮೇಶ್ ಗೌಡ ಅವರ ಮನೆಗೆ ಬರುವಂತೆ ತಿಳಿಸಿದ್ದಾರೆ. ಆದರೆ, ನಾನು ಅವರ ಮನೆಗೆ ತೆರಳಲು ನಿರಾಕರಿಸಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿರಿಯ ನಟಿ ಹೇಮಾ ಚೌಧುರಿಗೆ ತೀವ್ರ ಅನಾರೋಗ್ಯ : ಐಸಿಯುನಲ್ಲಿ ಚಿಕಿತ್ಸೆ
“ಬಳಿಕ, ನನಗೆ ತಮ್ಮೇಶ್ ಗೌಡ ಕರೆ ಮಾಡಿ ಕಾಂಪೌಂಡ್ ಕೆಲಸ ನಿಲ್ಲಿಸಿ, ವಾಪಸ್ ಹೋಗುವಂತೆ ಬೆದರಿಕೆ, ಧಮ್ಕಿ ಹಾಕಿದ್ದಾರೆ. ಕಾಂಪೌಂಡ್ ನಿರ್ಮಿಸಿದರೆ ಕಾಂಪೌಂಡನ್ನೇ ಕೆಡವುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಈ ಘಟನೆ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮೇಶ್ ಗೌಡ ವಿರುದ್ಧ ಈ ಹಿಂದೆ ಕಳ್ಳತನ ಆರೋಪ ಕೇಳಿ ಬಂದಿತ್ತು. ಇದೀಗ ಬೆದರಿಕೆ, ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ.