ಬೆಂಗಳೂರು ನಗರದ ಅಪಾರ್ಟ್‌ವೊಂದರಲ್ಲಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ವೈವಾಹಿಕ ಕಲಹದ ಕಾರಣದಿಂದಾಗಿ ಸಾವಿಗೆ ಶರಣಾಗಿರುವ ಆರೋಪ ಕೇಳಿಬಂದಿದೆ. 40 ವರ್ಷದ ಟೆಕ್ಕಿ ಮೃತಪಟ್ಟಿದ್ದು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.
ಮೃತ ಪ್ರಶಾಂತ್ ನಾಯರ್, ಲೆನೊವೊದಲ್ಲಿ ಹಿರಿಯ ಮಾರ್ಕೆಟಿಂಗ್ ವ್ಯವಸ್ಥಾಪಕರಾಗಿದ್ದರು. ಬೆಂಗಳೂರು ನಗರದ ಚಿಕ್ಕಬಾಣಾವರದಲ್ಲಿ ತನ್ನ ಪತ್ನಿ ಮತ್ತು ಎಂಟು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ಪತ್ನಿ ಪೂಜಾ ನಾಯರ್ ಡೆಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಟೆಕ್ಕಿ ಆತ್ಮಹತ್ಯೆ | ಅತುಲ್ ಸುಭಾಷ್ ಪತ್ನಿ, ಆಕೆಯ ತಾಯಿ, ಸಹೋದರನ ಬಂಧನ
ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಇತ್ತೀಚೆಗೆ ವಿಚ್ಛೇದನದ ನಿರ್ಧಾರ ಮಾಡಿದ್ದರು. ಆದರೆ ಕುಟುಂಬಸ್ಥರು ಜೊತೆಯಾಗಿರುವಂತೆ, ಮಾತನಾಡಿ ಮನಸ್ತಾಪ ಸರಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎಂದು ವರದಿಯಾಗಿದೆ.
ಭಾನುವಾರ ಪ್ರಶಾಂತ್‌ಗೆ ಪದೇ ಪದೇ ಕರೆ ಮಾಡಿದರೂ ಯಾವುದೇ ಸ್ಪಂದನೆ ಇರಲಿಲ್ಲ. ಆದ್ದರಿಂದಾಗಿ ತಂದೆ ಫ್ಲಾಟ್‌ಗೆ ತೆರಳಿದ್ದು, ಪ್ರಶಾಂತ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳದಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಸೋಲದೇವನಹಳ್ಳಿ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ವರ್ಷದ ಜನವರಿಯಲ್ಲಿ ಉತ್ತರ ಪ್ರದೇಶದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 24 ಪುಟಗಳ ಡೆತ್ ನೋಟ್ ಮತ್ತು ಒಂದುವರೆ ಗಂಟೆಯ ವಿಡಿಯೋ ರೆಕಾರ್ಡಿಂಗ್ ಮಾಡಿಟ್ಟು ಸಾವಿಗೆ ಶರಣಾಗಿದ್ದರು. ಪತ್ನಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು.
