- ಬಂಡೂರು ಕುರಿ ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹90 ಸಾವಿರದವರೆಗೆ ಮಾರಾಟ
- ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ ವ್ಯಾಪಾರವು ಈ ವರ್ಷ ಹೆಚ್ಚಾಗಿದೆ
ಕಳೆದ ಕೆಲವು ತಿಂಗಳ ಹಿಂದೆ ವಿವಾದದ ಕೇಂದ್ರ ಬಿಂದುವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೀಗ ಬಕ್ರೀದ್ ಸಂಭ್ರಮ ಮನೆ ಮಾಡಿದೆ. ಭಾನುವಾರದಂದು ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಜೋರಾಗಿ ನಡೆಯುತ್ತಿದೆ.
ಜೂನ್ 29ರಂದು ಬಕ್ರೀದ್ ಹಬ್ಬವಿದ್ದು, ಮೂರು ದಿನಕ್ಕೂ ಮುಂಚೆಯೇ ಕುರಿ, ಮೇಕೆ ಹಾಗೂ ಟಗರು ಖರೀದಿಗೆ ಜನ ಮುಗಿಬಿದ್ದಿದ್ದರು. ಭಾನುವಾರ ಬೆಳಗ್ಗೆಯಿಂದ ಮೈದಾನದಲ್ಲಿ ಜನಸಾಗರವೇ ನೆರೆದಿದ್ದು, ದಿನ ಕಳೆದಂತೆ ನೂಕುನುಗ್ಗಲು ಉಂಟಾಯಿತು.
ಕರ್ನಾಟಕದ ಹೆಮ್ಮೆಯ ಮಂಡ್ಯದ ಬಂಡೂರು (ಬನ್ನೂರು) ತಳಿ, ಕೊಪ್ಪಳದ ಗುಡ್ಡಗಾಡು ಪ್ರದೇಶದ ತೆಂಗುರಿ ತಳಿ, ಉತ್ತರ ಕರ್ನಾಟಕದ ಡೆಕ್ಕನಿ ತಳಿ, ರಾಜಸ್ಥಾನದ ಶಿರೋಹಿ, ಕೋಟಾ ತಳಿ, ಕಿರಿಗಾವು, ಮೌಳಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗಂಡಸಿ, ಶಿರಾ, ತುಮಕೂರು, ಚಿತ್ರದುರ್ಗ ಸೇರಿದಂತೆ ನೂರಾರು ತಳಿಗಳು ಮಾರಾಟಕ್ಕಿದ್ದವು.
ಬಂಡೂರು ಕುರಿಗಳು ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹90 ಸಾವಿರದವರೆಗೆ ಮಾರಾಟವಾದವು. ಅಮೀನಗಡ ತಳಿಯ ಟಗರು ಕನಿಷ್ಠ ₹20 ಸಾವಿರದಿಂದ ಗರಿಷ್ಠ ₹1.20 ಲಕ್ಷದವರೆಗೆ ಮಾರಾಟವಾಗಿವೆ. ಕರ್ನಾಟಕದ ನಾನಾ ಭಾಗಗಳಿಂದ ನೂರಾರು ಮಾರಾಟಗಾರರು ಮೈದಾನದಲ್ಲಿ ನೆರೆದಿದ್ದರು. ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ ವ್ಯಾಪಾರವು ಈ ವರ್ಷ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ಹೇಳಿದರು.
ಪ್ರಾಣಿಗಳ ಬೆಲೆ ಸುಮಾರು ₹10,000 ಪ್ರಾರಂಭವಾಗಿ ಒಂದು ಲಕ್ಷವನ್ನು ದಾಟಿತು. ಈದ್ಗಾ ಮಾರುಕಟ್ಟೆಯಲ್ಲಿ ವಿಶೇಷ ಆಕರ್ಷಣೆಯಾಗಿದ್ದು, ಕನ್ನಡದಲ್ಲಿ ‘ಟಗರು’ ಎಂದು ಕರೆಯಲ್ಪಡುವ ಗಂಡು ಕೊಂಬಿನ ಕುರಿ ಸುಮಾರು ನೂರು ಕೆಜಿ ತೂಕ ಹಾಗೂ ₹1.2 ಲಕ್ಷ ಬೆಲೆಯಿತ್ತು.
ಈ ಸುದ್ದಿ ಓದಿದ್ದೀರಾ? ₹100 ಸನಿಹಕ್ಕೆ 1ಕೆಜಿ ಟೊಮೆಟೊ ದರ!
“ಟಗರಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಬಾದಾಮಿ, ಗೋಡಂಬಿ ಹಾಗೂ ಹಣ್ಣುಗಳನ್ನು ನೀಡಲಾಗುತ್ತದೆ. ಅದರ ಆಹಾರದ ವೆಚ್ಚವೇ ದಿನಕ್ಕೆ ₹600 ಆಗುತ್ತದೆ. ಅದರ ತೂಕ 100 ಕೆಜಿ ಮುಟ್ಟಲು ಮೂರು ವರ್ಷಕ್ಕೂ ಹೆಚ್ಚು ಕಾಲ ಆರೈಕೆ ಮಾಡಬೇಕು” ಎಂದು ಮಾರಾಟಗಾರರೊಬ್ಬರು ಹೇಳಿದರು.
“ಕಳೆದ ವರ್ಷ ಬನ್ನೂರು ಕುರಿಯ ಬೆಲೆ ₹15 ಸಾವಿರ. ಆದರೆ, ಈ ವರ್ಷ ₹20 ಸಾವಿರ ಆಗಿದೆ. ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಈ ಬಾರಿ ದರ ಹೆಚ್ಚಾಗಿದೆ” ಎಂದು ಖರೀದಿದಾರರೊಬ್ಬರು ತಿಳಿಸಿದರು.