ಕೆಲಸ ಮಾಡದೇ ಮನೆಯಲ್ಲಿ ಇದ್ದ ಗಂಡನಿಗೆ ಕಷ್ಟದ ಅರಿವು ಮೂಡಿಸಲು ಹೋಗಿ ಸ್ವತಃ ಪತ್ನಿಯೇ ಪೇಚಿಗೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಂಡನಿಗೆ ಬುದ್ಧಿ ಕಲಿಸಲು ಪತ್ನಿ ಕಳ್ಳತನದ ನಾಟಕವಾಡಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗಂಡ ಮನೆಯಲ್ಲಿದ್ದುಕೊಂಡು ಊಟ ಮಾಡಿಕೊಂಡು ಆರಾಮಾಗಿ ಸುತ್ತಾಡಿಕೊಂಡು ಇರುತ್ತಾನೆ. ಆದರೆ, ಕೆಲಸ ಮಾಡಲು ತೆರಳುತ್ತಿರಲಿಲ್ಲ. ಇದರಿಂದ ಈತನ ಪತ್ನಿ ಬೇಸತ್ತಿದ್ದಳು. ಗಂಡನಿಗೆ ಜೀವನದ ಕಷ್ಟಗಳನ್ನು ತಿಳಿಸಬೇಕು ಹಾಗೂ ಅವನು ಈ ಕಷ್ಟಗಳನ್ನು ನೋಡಿ ಕೆಲಸಕ್ಕೆ ತೆರಳುವಂತಾಗಬೇಕು ಎಂದು ಪತ್ನಿ ತನ್ನ ಸ್ನೇಹಿತರ ಜೊತೆಗೆ ಸೇರಿ ಕಳ್ಳತನದ ನಾಟಕವಾಡಿದ್ದಾಳೆ.
ಮಹಿಳೆ ಬ್ಯಾಂಕ್‌ನಿಂದ 109ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಗಾಡಿಯ ಡಿಕ್ಕಿಯಲ್ಲಿಟ್ಟಿದ್ದಳು. ಬಳಿಕ ಮಕ್ಕಳನ್ನು ಟ್ಯೂಷನ್‌ಗೆ ಬಿಟ್ಟು ಬಂದಿದ್ದಳು. ಇದಾದ ಬಳಿಕ ಅತ್ತಿಗೆ ಮನೆಗೆ ತೆರಳಿ ನಂತರ ಮಲ್ಲೇಂಶ್ವರಂನ 13ನೇ ಕ್ರಾಸ್‌ನಲ್ಲಿರುವ ಟ್ಯೂಷನ್ ಬಳಿ ಬಂದಿದ್ದಳು. ಈ ವೇಳೆ ತನ್ನ ಗಾಡಿಯನ್ನು ಅಲ್ಲಿಯೇ ನಿಲ್ಲಿಸಿ, ಕೀಯನ್ನು ಗಾಡಿಯ ಫುಟ್‌ಮ್ಯಾಟ್‌ನಲ್ಲಿ ಬಚ್ಚಿಟ್ಟಿದ್ದಳು.
ಮಹಿಳೆಯ ಪೂರ್ವಯೋಜಿತ ಉಪಾಯದಂತೆ ತನ್ನ ಸ್ನೇಹಿತರಿಗೆ ಗಾಡಿ ನಿಲ್ಲಿಸಿದ ಸ್ಥಳಕ್ಕೆ ಬರಲು ಕರೆ ಮಾಡಿದ್ದಾಳೆ. ಮಹಿಳೆ ಹೇಳಿದಂತೆ ಆಕೆಯ ಸ್ನೇಹಿತರು ಬಂದು ಗಾಡಿಯ ಜತೆಗೆ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಘಟನೆ ಬಳಿಕ ಮಹಿಳೆ ತಾನೂ ವಾಕಿಂಗ್ ಮಾಡುವ ಸಮಯದಲ್ಲಿ ಅಲ್ಲಿಯೇ ನಿಲ್ಲಿಸಿದ ಗಾಡಿಯ ಜತೆಗೆ ಆರೋಪಿಗಳು ಬಂಗಾರ ಕಳ್ಳತನ ಮಾಡಿದ್ದಾರೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಎಲ್ಲೆಲ್ಲಿ ಸಂಚಾರ ವ್ಯತ್ಯಯ; ಇಲ್ಲಿದೆ ನೋಡಿ
ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ, ಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿಗಳಾದ ಧನಂಜಯ ಮತ್ತು ರಾಕೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಹಿಳೆ ಹೇಳಿದಂತೆ ಕೆಲಸ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿ, 109ಗ್ರಾಂ ಚಿನ್ನ ಹಾಗೂ ಎರಡು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮನೆಯಲ್ಲಿರುವ ಬಂಗಾರವೆಲ್ಲ ಕಳ್ಳತನವಾದರೆ ಗಂಡ ಸರಿದಾರಿಗೆ ಬರುತ್ತಾನೆ. ಆಗ ಕೆಲಸಕ್ಕೆ ಹೋಗುತ್ತಾನೆ ಎಂದು ಉಪಾಯ ಮಾಡಿದ ಪತ್ನಿ ಈಗ ತಾನೇ ಪೇಚಿಗೆ ಸಿಲುಕುವಂತಾಗಿದೆ.