ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ 60 ವರ್ಷ ಪೂರ್ಣಗೊಳಿಸಿ ವಜ್ರ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಈ ಸಂದರ್ಭದಲ್ಲಿ 59ನೇ ಘಟಿಕೋತ್ಸವ ಸಮಾರಂಭ 2025ರ ಮೇ 15ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರು ಜಿ.ಕೆ.ವಿ.ಕೆ. ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರ್ ರಾಷ್ಟ್ರೀಯ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿವಿ ಕುಲಪತಿ ಡಾ. ಎಸ್.ವಿ.ಸುರೇಶ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉಪಸ್ಥಿತರಿರುವರು. ಇಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್.ಅವಸ್ಥಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಪ್ರಸಕ್ತ ಸಾಲಿನ ವಿವಿ ಸಾಧನೆಯನ್ನು ನಾನು ಸಭೆಗೆ ಪರಿಚಯಿಸಲಿದ್ದೇನೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ 1,271 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುವುದು. ಅವರಲ್ಲಿ 871 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 311 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 89 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಮಾರಂಭದಲ್ಲಿ ಡಾಕ್ಟರ್ ಆಫ್ ಫಿಲಾಸೊಫಿ ಪದವಿಯಲ್ಲಿ ಒಟ್ಟು 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ಅದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 3 ವಿದ್ಯಾರ್ಥಿಗಳು ಕೃಷಿ ವಿವಿಯ 14 ಚಿನ್ನದ ಪದಕಗಳನ್ನು, 10 ದಾನಿಗಳ ಚಿನ್ನದ ಪದಕಗಳು, 5 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ 1 ಆವರಣದ ಚಿನ್ನದ ಪದಕಗಳನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 62 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 23 ವಿದ್ಯಾರ್ಥಿನಿಯರು ಹಾಗೂ 5 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 17 ಚಿನ್ನದ ಪದಕಗಳು ಹಾಗೂ 7 ಆವರಣದ ಚಿನ್ನದ ಪದಕಗಳನ್ನು, 25 ದಾನಿಗಳ ಚಿನ್ನದ ಪದಕಗಳು ಹಾಗೂ 13 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ ಎಂದರು.
ಇದಲ್ಲದೆ ಸ್ನಾತಕ ಪದವಿಯಲ್ಲಿ ಒಟ್ಟು 58 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಇದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 6 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 6 ಚಿನ್ನದ ಪದಕಗಳು, 4 ಆವರಣದ ಚಿನ್ನದ ಪದಕಗಳು, 1 ಕೃಷಿ ವಿವಿಯ ಕ್ರೀಡಾ ಚಿನ್ನದ ಪದಕ, 41 ದಾನಿಗಳ ಚಿನ್ನದ ಪದಕಗಳು ಹಾಗೂ 6 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ ಎಂದರು.
ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟಾರೆ 150 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದು ಅದರಲ್ಲಿ 49 ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯದ 29 ಚಿನ್ನದ ಪದಕ, 66 ದಾನಿಗಳ ಚಿನ್ನದ ಪದಕ, 9 ಆವರಣದ ಚಿನ್ನದ ಪದಕ ಹಾಗೂ 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಅದರಂತೆ 14 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 8 ಚಿನ್ನದ ಪದಕ, 10 ದಾನಿಗಳ ಚಿನ್ನದ ಪದಕ ಹಾಗೂ 5 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು, 3 ಆವರಣದ ಚಿನ್ನದ ಪದಕಗಳು ಹಾಗೂ 1 ಕೃಷಿ ವಿವಿಯ ಕ್ರೀಡಾ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದರು.
ಒಟ್ಟು 63 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 50 ಚಿನ್ನದ ಪದಕಗಳನ್ನು, 76 ದಾನಿಗಳ ಚಿನ್ನದ ಪದಕಗಳನ್ನು ಹಾಗೂ 24 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಬೆಂಗಳೂರು ಜಿಕೆವಿಕೆ ಕೃಷಿ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಟಿ.ಎಲ್. ಅತೀ ಹೆಚ್ಚು ಅಂದರೆ 13 ಚಿನ್ನದ ಪದಕಗಳು 4 ದಾನಿಗಳ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ಮತ್ತು ಕೃಷಿ ವಿಜ್ಞಾನಿ ಯೋಗೇಂದ್ರ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿಯ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ಸಹ ವಿಸ್ತರಣಾ ನಿದರ್ದೇಶಕ ಡಾ. ಕೆ.ಸಿ.ರಘುಪ್ರಸಾದ್, ವಿಸ್ತರಣಾ ನಿದರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ ಉಪಸ್ಥಿತರಿದ್ದರು.