₹12 ಲಕ್ಷ ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಮಾಡಿದ ಗಣಪತಿ ಮೂರ್ತಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತರಲಾಗಿದ್ದು, ನಗರದ ರಾಜಾಜಿನಗರ 2ನೇ ಹಂತದ ಮಿಲ್ಕ್ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ್ ಯುವಕರ ಸಂಘ ಸೆ.18 ರಂದು ಪ್ರತಿಷ್ಠಾಪನೆ ಮಾಡಲಿದೆ.
ಹುಬ್ಬಳ್ಳಿಯ ಬಮ್ಮಾಪುರ ನಿವಾಸಿ ಮೂರ್ತಿ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ಈ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ. ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್ ಹಾಗೂ ನವರತ್ನ ಹರಳುಗಳಿಂದ ಗಣೇಶ ಮೂರ್ತಿಯ ಮುಖವೊಂದನ್ನು ಹೊರತುಪಡಿಸಿ, ಉಳಿದ ಎಲ್ಲ ಭಾಗಗಳನ್ನು ತಯಾರು ಮಾಡಲಾಗಿದೆ. ಈ ಗಣೇಶ ಮೂರ್ತಿ ಒಟ್ಟು 5.7 ಅಡಿ ಎತ್ತರವಿದೆ. ಸುಮಾರು 150 ಕೆಜಿ ತೂಕ ಹೊಂದಿದೆ.
ಬೆಂಗಳೂರಿನ ಸ್ವಸ್ತಿಕ್ ಯುವಕರ ಸಂಘ ಕಳೆದ ಹಲವು ವರ್ಷಗಳಿಂದ ಅಮೆರಿಕನ್ ಡೈಮಂಡ್ ಹರಳುಗಳಿಂದ ಗಣೇಶ ಮೂರ್ತಿಯನ್ನು ತಯಾರು ಮಾಡಿಸುತ್ತಿದ್ದಾರೆ. ಏಳು ದಿನಗಳವರೆಗೆ ಪ್ರತಿಷ್ಠಾಪನೆ ಮಾಡಿ ಗಣೇಶನಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣೇಶ ಚತುರ್ಥಿಯಂದು ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ
ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿಯನ್ನು ತಯಾರು ಮಾಡಿದ್ದು, ರೈಲಿನ ಮೂಲಕ ಬೆಂಗಳೂರಿಗೆ ಶುಕ್ರವಾರ ಸಾಗಿಸಲಾಗಿದೆ. ಬೆಂಗಳೂರಿನ ಸ್ವಸ್ತಿಕ್ ಯುವಕರ ಸಂಘ ಗಣೇಶ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತದೆ.
3 ಲಕ್ಷ ಗಣೇಶ ಮೂರ್ತಿ ತಯಾರು ಮಾಡಿದ ಕುಟುಂಬ
ಈ ಬಾರಿಯ ಗಣೇಶ ಚತುರ್ಥಿಗೆ ಬೆಳಗಾವಿ ಜಿಲ್ಲೆಯ ಕುಂಬಾರ ಕುಟುಂಬವೊಂದು ಬರೋಬ್ಬರಿ 3 ಲಕ್ಷ ಗಣೇಶ ಮೂರ್ತಿಗಳನ್ನು ತಯಾರು ಮಾಡಿದೆ.
ಈ ಕುಟುಂಬದ ಮೂಲ ವೃತ್ತಿ ಗಣೇಶನ ಮೂರ್ತಿಗಳನ್ನು ತಯಾರು ಮಾಡುವುದು. ಕಳೆದ ಆರು ವರ್ಷಗಳಿಂದ ಮಣ್ಣಿನ ಮೂರ್ತಿಗಳನ್ನು ಮಾತ್ರ ತಯಾರು ಮಾಡುತ್ತಿದ್ದಾರೆ. ಈ ಕುಟುಂಬ ಆರಂಭದಲ್ಲಿ 40 ಮೂರ್ತಿಗಳನ್ನು ತಯಾರು ಮಾಡುತ್ತಿತ್ತು. ಈ ವರ್ಷ 3 ಲಕ್ಷ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದೆ.