ಇತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿವೆ. ಇದೀಗ, ಅಶ್ಲೀಲವಾಗಿ ಯುವತಿಯೊಬ್ಬರ ಮೈ-ಕೈ ಮುಟ್ಟಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ನಡೆದಿದೆ.
22 ವರ್ಷದ ಯುವತಿಯೊಬ್ಬರು ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ 9:40ರ ಸುಮಾರಿಗೆ ಮೆಟ್ರೋ ಹತ್ತಿದ್ದಾರೆ. ಪೀಕ್ ಅವರ್‌ನಲ್ಲಿ ಹೆಚ್ಚು ಜನಸಂದಣಿ ಕೂಡಿರುವ ಮೆಟ್ರೋದಲ್ಲಿ ಹಿಂದೆ ನಿಂತಿದ್ದ ಆರೋಪಿ ಲೋಕೇಶ್ ಯುವತಿಯ ಮೈ-ಕೈ ಅನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಇದನ್ನು ಕಂಡ ಯುವತಿ ಜೋರಾಗಿ ಕೂಗಲು ಪ್ರಾರಂಭ ಮಾಡಿದ್ದಾಳೆ. ಈ ವೇಳೆ, ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು, ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆಯಿಂದ ಆರೋಪಿಯ ಇತಿಹಾಸ ಬಯಲು
ಆರೋಪಿ ಲೋಕೇಶ್ ಒಬ್ಬ ಕಳ್ಳ ಎಂಬುದು ತನಿಖೆಯಿಂದ ಬಯಲಾಗಿದೆ. ಈತ ಈ ಹಿಂದೆ ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದನು. ಈತನ ಮೇಲೆ ಈ ಹಿಂದೆ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿ ಬಳಿಯಿಂದ ಪೊಲೀಸರು 20 ಮೊಬೈಲ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಮೇರಾ ನಾಮ್ ಜೋಕರ್’ ಖ್ಯಾತಿಯ ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ
ನ.20ರಂದು ನಡೆದಿದ್ದ ಲೈಂಗಿಕ ಕಿರುಕುಳ
ನಿತ್ಯ 7 ಲಕ್ಷ ಜನ ಸಂಚರಿಸುವ ನಮ್ಮ ಮೆಟ್ರೋ, ಇತ್ತೀಚೆಗೆ ಕೆಲವು ವಿಷಯಗಳಿಂದ ಸುದ್ದಿಯಾಗುತ್ತಿದೆ. ಈ ಹಿಂದೆ ವಿದೇಶಿ ಯೂಟ್ಯೂಬರ್ ಒಬ್ಬರು ಟಿಕೆಟ್ ನೀಡದೆ ಮೆಟ್ರೋದಲ್ಲಿ ಪ್ರಯಾಣಿಸುವುದು ಹೇಗೆ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೇ, ಕಿಡಿಗೇಡಿಯೊಬ್ಬ ಯುವತಿ ಜತೆಗೆ ಅಸಭ್ಯವಾಗಿ ನಡೆದುಕೊಂಡು ಸುದ್ದಿಯಾಗಿತ್ತು.
ನವೆಂಬರ್ 20ರ ಬೆಳಗ್ಗೆ ಸುಮಾರು 8.30ರ ವೇಳೆಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಪ್ರಯಾಣ ಮಾಡುತ್ತಿದ್ದ ವೇಳೆ ಕಿಡಿಗೇಡಿಯೋರ್ವ ಹಿಂಬದಿಯಿಂದ ಯುವತಿಯೊಬ್ಬರನ್ನು ಸ್ಪರ್ಶಿಸಿದ್ದಾನೆ. ಈ ಘಟನೆಯನ್ನು ಯುವತಿ ತನ್ನ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರವನ್ನು ತಿಳಿದ ಯುವತಿಯರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕಿಡಿಗೇಡಿಯ ಬಂಧನಕ್ಕೆ ಆಗ್ರಹಿಸಿದ್ದರು.
ಕಿಡಿಗೇಡಿ ಯುವಕ ಕೆಂಪು ಶರ್ಟ್ ಧರಿಸಿದ್ದ ಎಂದು ಹೇಳಲಾಗುತ್ತಿತ್ತು. ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.
Nice information