ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದೀಗ, ಬಸ್ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣಕ್ಕೀಡಾದ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ವರ್ತೂರು ರಸ್ತೆಯಲ್ಲಿ ನಡೆದಿದೆ.
ಎಳಂಗೋವನ್ ಸೆಂಕತ್ತವಲ್(45) ಮೃತ ಬೈಕ್ ಸವಾರ. ಜನವರಿ 5ರಂದು ಬೆಳಗ್ಗೆ 9.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಮೃತ ಬೈಕ್ ಸವಾರ ಎಳಂಗೋವನ್ ಸೆಂಕತ್ತವಲ್ ತೆರಳುತ್ತಿದ್ದರು. ಇದೇ ಮಾರ್ಗದಲ್ಲಿ ಬರುತ್ತಿದ್ದ ವೇಳೆ ಬೈಕ್‌ಗೆ ಬಿಎಂಟಿಸಿ ವೊಲ್ವೋ ಬಸ್ ಡಿಕ್ಕಿ ಹೊಡೆದಿದೆ. ರಭಸಕ್ಕೆ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸವಾರನ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲು ಯತ್ನಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಹೆಚ್ಎಎಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣಗಳು
ಪತಿ ಗುರುಮೂರ್ತಿ ಹಾಗೂ ಎರಡು ವರ್ಷದ ಮಗು ಗಾನವಿ ಜತೆಗೆ ನಗರದಲ್ಲಿ ನಡೆಯುತ್ತಿರುವ ಪ್ರೊ ಕಬ್ಬಡಿ ವೀಕ್ಷಣೆ ಮಾಡಲು ಬೈಕ್‌ನಲ್ಲಿ ತೆರಳುತ್ತಿದ್ದ ಗೃಹಿಣಿ ಸೀಮಾ (21) ಅವರು ಬಿಎಂಟಿಸಿ ಬಸ್‌ಗೆ ಬಲಿಯಾಗಿದ್ದರು. ಡಿ.13ರ ಸಾಯಂಕಾಲ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಮಡಿವಾಳ ಫ್ಲೈಓವರ್ ಮೇಲೆ ಈ ದುರ್ಘಟನೆ ಸಂಭವಿಸಿತ್ತು.
ಡಿಸೆಂಬರ್ 28ರಂದು ನಗರದ ಸುಬ್ಬಯ್ಯ ಸರ್ಕಲ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಪಾದಚಾರಿ ಪುಷ್ಪ ಮೃತಪಟ್ಟಿದ್ದರು.
2023ರ ಆಗಸ್ಟ್ 16ರಂದು ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದು ಶಾಲಾ ಬಾಲಕಿ ಮೃತಪಟ್ಟಿದ್ದಳು.
2023ರ ಆಗಸ್ಟ್ 11ರಂದು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದನು. ಬೆಂಗಳೂರಿನ ಯುಬಿ ಸಿಟಿಯ ಸಿಗ್ನಲ್ ಬಳಿ ದುರ್ಘಟನೆ ಸಂಭವಿಸಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಮೇಲ್
ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಚಾಲನಾ ಸಿಬ್ಬಂದಿಗಳಿಗೆ ಸಂಚಾರ ನಿಯಮ ಪಾಲನೆ ತರಬೇತಿ ಕಳೆದ ಒಂದು ತಿಂಗಳ ಕಾಲ ಸಂಸ್ಥೆ ನಡೆಸಿದೆ. ಆದರೆ, ತರಬೇತಿ ಮುಗಿದರೂ ಕೂಡ ಇನ್ನೂ ಅಪಘಾತ ಎಸಗುವ ಕೃತ್ಯಗಳು ಕಡಿಮೆಯಾಗಿಲ್ಲ.