ವಿದೇಶಿ ಪ್ರಜೆಯೊಬ್ಬ ಮನೆಯಲ್ಲಿ ಅಡುಗೆ ಮಾಡುವ ಪ್ರೆಷರ್ ಕುಕ್ಕರ್ ಮೂಲಕ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದವನನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಬೆಂಜಮಿನ್ ಬಂಧಿತ ಆರೋಪಿ. ಈತ ಮೂಲತಃ ನೈಜೀರಿಯಾದವನು. ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಈತನಿಂದ ಸದ್ಯ ₹10 ಕೋಟಿ ಮೌಲ್ಯದ 5 ಕೆಜಿ ಎಂಡಿಎಂಎ, ಡ್ರಗ್ಸ್ ತಯಾರಿಸಲು ಬೇಕಾದ ಕಚ್ಚಾ ಪದಾರ್ಥಗಳು, 5 ಲೀಟರ್ ಪ್ರೆಷರ್ ಕುಕ್ಕರ್, ಸ್ಟೌವ್, ಗ್ಯಾಸ್ ಸಿಲಿಂಡರ್, 1 ಮೊಬೈಲ್ ಫೋನ್, ದ್ವಿಚಕ್ರ ವಾಹನ ಎಂಡಿಎಂಎ ಮತ್ತು ಅದರ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಹಾಗೂ ರಾಸಾನಿಕ ಆಮ್ಲ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಿದೇಶಿ ವ್ಯಕ್ತಿ ನಗರದ ಅವಲಹಳ್ಳಿಯಲ್ಲಿ ಬಟ್ಟೆ ವ್ಯಾಪಾರ ಮಾಡುವುದಾಗಿ 2021ರಲ್ಲಿ ಬಾಡಿಗೆ ಮನೆ ಪಡೆದಿದ್ದನು. ಆದರೆ, ಆತನ ಮನೆಯಲ್ಲಿ ಕಚ್ಚಾ ಪದಾರ್ಥಗಳನ್ನು ಬಳಕೆ ಮಾಡಿ ಪ್ರೆಷರ್ ಕುಕ್ಕರ್‌ನಲ್ಲಿ ಸಿಂಥೆಟಿಕ್ ಡ್ರಗ್ ತಯಾರು ಮಾಡುತ್ತಿದ್ದನು. ಹೀಗೇ ಮನೆಯಲ್ಲಿ ತಯಾರು ಮಾಡಿದ ಮಾದಕ ವಸ್ತುಗಳನ್ನು ರಾಜ್ಯ, ಅಂತಾರಾಜ್ಯ ಸೇರಿದಂತೆ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದನು.
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಈತನನ್ನು ಪೊಲೀಸರು ಬಂಧಿಸಿ 100 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈತನನ್ನು ಬಂಧಿಸಿದ ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತ ತಾನು ಮನೆಯಲ್ಲಿಯೇ ಡ್ರಗ್ ತಯಾರು ಮಾಡುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, “ಆರೋಪಿ ವ್ಯಾಪಾರಿ ವೀಸಾ ಮೂಲಕ ಭಾರತಕ್ಕೆ ಬಂದಿದ್ದಾನೆ. ವೀಸಾ ಅವಧಿಯೂ 2022ರಲ್ಲಿ ಅಂತ್ಯವಾಗಿದೆ. ಆರೋಪಿಯನ್ನು ನವೆಂಬರ್ 20ರವರೆಗೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಈ ಹಿಂದೆ ಹೈದರಾಬಾದ್ನಲ್ಲಿ ಬಂಧನವಾಗಿದ್ದ ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜಿಮ್ ಸೆಂಟರ್‌ನಲ್ಲಿ ಯುವತಿಯ ಖಾಸಗಿ ವಿಡಿಯೋ ಚಿತ್ರೀಕರಣ; ಟ್ರೇನರ್ ಬಂಧನ
ಬಂಧಿತನ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಮತ್ತು ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.