ಬಾಡಿಗೆ ಹಣ ಕೇಳಿದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀದೇವಿ ಹಲ್ಲೆಗೊಳಗಾದ ಮಹಿಳೆ. ಸದ್ದಾಂ ಹಲ್ಲೆ ಮಾಡಿದ ವ್ಯಕ್ತಿ. ಮುನೇಶ್ವರನಗರದಲ್ಲಿರುವ ಕಟ್ಟಡವೊಂದರಲ್ಲಿ ಹಲ್ಲೆಗೊಳಗಾದ ಮಹಿಳೆ ಬಾಡಿಗೆ ಮನೆಯಲ್ಲಿದ್ದರು. ಈ ಕಟ್ಟಡ ಮಾಲೀಕ ಫಯಾಜ್ ಹಾಗೂ ಆತನ ಕುಟುಂಬ ವಿದೇಶದಲ್ಲಿದ್ದರು. ನಗರದಲ್ಲಿರುವ ಮನೆಗಳ ಬಾಡಿಗೆ ಹಣ ಸಂಗ್ರಹಿಸಿ ಫಯಾಜ್ ಅವರಿಗೆ ಕಳುಹಿಸುವ ಜವಾಬ್ದಾರಿಯನ್ನು ಶ್ರೀದೇವಿ ಅವರಿಗೆ ನೀಡಲಾಗಿತ್ತು. ಅದರಂತೆಯೇ ಪ್ರತಿ ತಿಂಗಳು ಶ್ರೀದೇವಿ ಹಣ ಸಂಗ್ರಹಿಸುತ್ತಿದ್ದರು.
ಅದೇ ಕಟ್ಟಡದಲ್ಲಿ ವಾಸವಿದ್ದ ನಜೀರ್ ಎಂಬ ಕುಟುಂಬದವರು ಕಳೆದ ಮೂರು ತಿಂಗಳಿನಿಂದ ಬಾಡಿಗೆ ಹಣ ನೀಡಿರಲಿಲ್ಲ. ಹಾಗಾಗಿ ಶ್ರೀದೇವಿ ಬಾಡಿಗೆ ಹಣ ನೀಡುವಂತೆ ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಈ ಘಟನೆಯನ್ನು ನಜೀರ್ ಅವರ ಮಗ ಸದ್ದಾಂಗೆ ತಿಳಿಸಿದ್ದಾರೆ.
ಇದಕ್ಕೆ ಕೋಪಗೊಂಡ ಸದ್ದಾಂ ಶ್ರೀದೇವಿ ಅವರ ಮನೆ ಮುಂದೆ ಹೋಗಿ ಕೂಗಾಡಿದ್ದಾನೆ. ಅಲ್ಲದೆ, ಅವರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಘಟನೆ ನಡೆದು ಒಂದು ತಿಂಗಳು ಕಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉಬರ್ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಚಾಲಕ
ಹಲ್ಲೆಗೊಳಗಾದ ಶ್ರೀದೇವಿ ಅವರು ಬಂಡೇಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಕೊಲೆಯತ್ನದ ಸೆಕ್ಷನ್ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.