ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.02 ಕೆಜಿ ಹೈಗ್ರೇಡ್ ಕೊಕೇನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಕೀನ್ಯಾ ಮೂಲದ ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಂಧಿಸಿದೆ.
ಆರೋಪಿ ಅಜೆಂಗ್ ಓ ಕ್ಯಾರೋಲಿನ್ ಅಗೋಲಾ ತನ್ನ ಖಾಸಗಿ ಭಾಗಗಳು ಮತ್ತು ಒಳ ಉಡುಪುಗಳಲ್ಲಿ ಕ್ಯಾಪ್ಸುಲ್ಗಳಲ್ಲಿ ನಿಷಿದ್ಧ ವಸ್ತುವನ್ನು ಬಚ್ಚಿಟ್ಟಿದ್ದಳು.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಆಕೆಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್ಲೈನ್ಸ್ ವಿಮಾನದಲ್ಲಿ (ಇಟಿ 690) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ 11.09ಕ್ಕೆ ಬಂದಿದ್ದರು.
“ಸಿಐಎಸ್ಎಫ್ ಪೋಲೀಸ್ ಲಕ್ಷ್ಮಿ ಮೀನಾ ಅವರು ಆರೋಪಿ ಅಗೋಲಾ ಅವರನ್ನು ಪರೀಕ್ಷಿಸುವಾಗ ಅನುಮಾನಗೊಂಡಿದ್ದಾರೆ. ಬಳಿಕ ಆಕೆಯನ್ನು ತಪಾಸಣೆ ಮಾಡಲು ಪ್ರತ್ಯೇಕ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಯ ಒಳ ಉಡುಪುಗಳಲ್ಲಿ ಅನೇಕ ಕ್ಯಾಪ್ಸುಲ್ಗಳು ಕಂಡುಬಂದಿವೆ. ಕ್ಯಾಪ್ಸೂಲ್ಗಳಲ್ಲಿ ಅತ್ಯಂತ ಗುಣಮಟ್ಟದ ಕೊಕೇನ್ ಅನ್ನು ಸಾಗಿಸುತ್ತಿದ್ದಳು. ಇದು ಸುಮಾರು ₹12 ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ” ಎಂದು ಮೂಲಗಳು ತಿಳಿಸಿವೆ.
“ಆರೋಪಿ ಅಗೋಲಾಳನ್ನು ಆಸ್ಟರ್ ಮೆಡಿಕಲ್ ಸೆಂಟರ್ಗೆ ಕರೆದೊಯ್ಯಲಾಯಿತು. ಆಕೆಯನ್ನು ಸಂಪೂರ್ಣ ತಪಾಸಣೆ ಮಾಡಲಾಗಿದೆ. ನಂತರ, ವೈದ್ಯಕೀಯ ಸಿಬ್ಬಂದಿ ಆಕೆಯ ಖಾಸಗಿ ಭಾಗಗಳಲ್ಲಿ ಹೆಚ್ಚಿನ ಕ್ಯಾಪ್ಸುಲ್ಗಳನ್ನು ಮರೆಮಾಡಿರುವುದನ್ನು ಕಂಡುಕೊಂಡರು. ಇನ್ನೂ ಕೆಲವು ಕ್ಯಾಪ್ಸುಲ್ಗಳನ್ನು ನುಂಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ. ಬಳಿಕ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆರೋಪಿಯ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲಾಯಿತು” ಎಂದು ತಿಳಿದುಬಂದಿದೆ. ಪತ್ತೆಯಾದ ಕ್ಯಾಪ್ಸುಲ್ಗಳ ಸಂಖ್ಯೆಯ ಮಾಹಿತಿಯನ್ನು ಒದಗಿಸಲಾಗಿಲ್ಲ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ
“ಕೊಕೇನ್ ಅತ್ಯಂತ ಉತ್ತಮ ಗುಣಮಟ್ಟದ್ದಾಗಿದೆ. ಮಾರುಕಟ್ಟೆಯಲ್ಲಿ ಸುಮಾರು ₹12 ಕೋಟಿ ಮೌಲ್ಯವನ್ನು ಹೊಂದಿದೆ. ವಶಪಡಿಸಿಕೊಂಡ ವಸ್ತುವನ್ನು ಎನ್ಸಿಬಿಗೆ ಹಸ್ತಾಂತರಿಸಲಾಗಿದೆ. ಆರೋಪಿ ಸ್ವಂತವಾಗಿ ಕಾರ್ಯನಿರ್ವಹಿಸುತ್ತಿದ್ದಾರೋ ಅಥವಾ ಯಾವುದಾದರೂ ಗುಂಪು ದಂಧೆಯ ಭಾಗವಾಗಿದ್ದಾರೋ ಎಂಬುದನ್ನು ಪತ್ತೆಹಚ್ಚಲು ವಿಚಾರಣೆ ನಡೆಯುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದರು.