ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಮನೆಗಳಿಂದ ಕಸ ಸಂಗ್ರಹಿಸಲು ಮತ್ತು ಅದನ್ನು ವಿಲೇವಾರಿ ಮಾಡಲು ಕನಿಷ್ಠ ಸೇವಾ ಶುಲ್ಕ ₹30 ನಿಗದಿ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ನಗರದ ಮನೆಗಳಲ್ಲಿನ ಕಸವನ್ನು ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ನಾಗರಿಕರಿಗೆ ತಿಂಗಳಿಗೆ ₹30 ಕನಿಷ್ಠ ಸೇವಾ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ, ಈ ನಿಯಮ ಜಾರಿಗೆ ಬರಲಿದೆ.
ನಗರದಲ್ಲಿ ಸರಿಸುಮಾರು 46 ಲಕ್ಷ ಕುಟುಂಬಗಳಿವೆ. ಈ ಮನೆಗಳು ಪಾಲಿಕೆಯ ಉದ್ದೇಶಿತ ಶುಲ್ಕ ಯೋಜನೆಯಡಿ ಬರುತ್ತವೆ. ಮಾಸಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಶುಲ್ಕ ನಿಗದಿ ಮಾಡಲಾಗಿದೆ. ಅಲ್ಲದೆ, 6.32 ಲಕ್ಷಕ್ಕೂ ಹೆಚ್ಚು ವಾಣಿಜ್ಯ ಸಂಸ್ಥೆಗಳು ಉದ್ದೇಶಿತ ಶುಲ್ಕದ ಅಡಿಯಲ್ಲಿ ಬರುವ ನಿರೀಕ್ಷೆಯಿದೆ. ಈ ಎಲ್ಲದರಿಂದ ಹೊಸ ಕ್ರಮದ ಅಡಿಯಲ್ಲಿ ತಿಂಗಳಿಗೆ ₹72.39 ಕೋಟಿ ಆದಾಯ ಸಂಗ್ರಹಣೆ ಮಾಡುವ ಗುರಿ ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 20 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು; ಕೆಲಸದಾಕೆ ಬಂಧನ
ಮನೆ ಅಥವಾ ಕಟ್ಟಡದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣವನ್ನು ನಿರ್ಣಯಿಸಲು ಆಸ್ತಿ ತೆರಿಗೆಗಿಂತ ಭಿನ್ನವಾಗಿ ವಿದ್ಯುತ್ ಬಳಕೆಯು ಹೆಚ್ಚು ಸೂಕ್ತವಾದ ಮಾರ್ಗವಾಗಿದೆ. ಶುಲ್ಕವನ್ನು ಸಂಗ್ರಹಿಸಲು, ಬಿಬಿಎಂಪಿಯು ವಿದ್ಯುತ್ ಮಂಡಳಿಗೆ ನಿರ್ದಿಷ್ಟ ಮೊತ್ತವನ್ನು ಸೇವಾ ಶುಲ್ಕವಾಗಿ ನೀಡುವ ಮೂಲಕ ಬೆಸ್ಕಾಂ ಸಹಾಯವನ್ನು ಪಡೆಯಲಿದೆ ಎಂದು ತಿಳಿದುಬಂದಿದೆ.