- ಡಿಸೆಂಬರ್‌ನೊಳಗೆ ಯೋಜನೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿದ ಬಿಡಬ್ಲೂಎಸ್‌ಎಸ್‌ಬಿ
- ನಾನಾ ದೇಶಗಳಲ್ಲಿ ತಯಾರಾದ ಬಿಡಿಭಾಗಗಳು ರಾಜ್ಯಕ್ಕೆ ಆಗಮಿಸುವುದು ವಿಳಂಬ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಕಾವೇರಿ 5ನೇ ಹಂತದ ಯೋಜನೆಗೆ ಇದೀಗ ಕಾರ್ಮಿಕರ ಕೊರತೆ ಮತ್ತು ಸಲಕರಣೆಗಳ ಸಮಸ್ಯೆ ಎದುರಾಗಿದ್ದು, ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದ ಈ ಯೋಜನೆ ಆರು ತಿಂಗಳು ವಿಳಂಬವಾಗಿದೆ. ಇದೀಗ ಸಲಕರಣೆ ಮತ್ತು ಕಾರ್ಮಿಕರ ಕೊರತೆ ಎದುರಾಗಿದೆ. ಆದರೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಈ ವರ್ಷದ ಡಿಸೆಂಬರ್‌ನೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿ ಹೊಂದಿರುವ ಈ ಯೋಜನೆಗೆ ₹5,500 ಕೋಟಿ ಹಣವನ್ನು ಜಪಾನ್ ಇಂಟರ್‌ನ್ಯಾಶನಲ್ ಕೋಆಪರೇಷನ್ ಏಜೆನ್ಸಿ ನೀಡುತ್ತಿದೆ. ಈ ಯೋಜನೆಯು ಮಹದೇವಪುರ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಕೆ.ಆರ್.ಪುರಂ ಮತ್ತು ಬ್ಯಾಟರಾಯನಪುರಕ್ಕೆ ದಿನಕ್ಕೆ 775 ಮಿಲಿಯನ್ ಲೀಟರ್ ನೀರು ಸರಬರಾಜು ಮಾಡುವ ನಿರೀಕ್ಷೆಯಿದೆ.
“ನೀರಿಗಾಗಿ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ನಿಂದ ವಾಜರಹಳ್ಳಿಯವರೆಗೆ 70 ಕಿಮೀ ವರೆಗೆ 3,000 ಎಂಎಂ ವ್ಯಾಸದ ಪೈಪ್‌ಲೈನ್ ಹಾಕುತ್ತಿದ್ದೇವೆ. ಸುಮಾರು 85% ಕೆಲಸ ಪೂರ್ಣಗೊಂಡಿದೆ. ಗ್ರಾಮಗಳಿಗೆ ನೀರು ಹಾಯಿಸಲು ಈಗಿರುವ ಪಂಪಿಂಗ್ ಸ್ಟೇಷನ್ ಪಕ್ಕದ ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ಹೊಸ ಪಂಪಿಂಗ್ ಸ್ಟೇಷನ್ ನಿರ್ಮಿಸಬೇಕು” ಎಂದು ಬಿಡಬ್ಲೂಎಸ್‌ಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದರು.
“ಈ ಯೋಜನೆಯ ಕಾಮಗಾರಿಗೆ ಬಡಗಿಗಳು ಮತ್ತು ಬಾರ್ ಬೆಂಡರ್‌ಗಳಂತಹ ಕಾರ್ಮಿಕರು ಅವಶ್ಯಕವಾಗಿದ್ದು, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದಿಂದ ಕರೆತರಬೇಕಾಗಿದೆ. ಕೋವಿಡ್ ಬಳಿಕ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಸದ್ಯಕ್ಕೆ 40-50% ಕಾರ್ಮಿಕರ ಕೊರತೆಯಿದೆ. ಗುತ್ತಿಗೆದಾರರು ಆದಷ್ಟು ಬೇಗ ಕಾರ್ಮಿಕರನ್ನು ಕರೆತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
“ನಾನಾ ದೇಶಗಳಲ್ಲಿ ತಯಾರಾದ ಬಿಡಿಭಾಗಗಳು ರಾಜ್ಯಕ್ಕೆ ಆಗಮಿಸುವುದು ವಿಳಂಬವಾಗುತ್ತಿದೆ. ಇತ್ತೀಚೆಗೆ ಹೆಚ್ಚಿನ ಸಾಮರ್ಥ್ಯದ ಪಂಪ್‌ಗಳು (2000 HP), ಜಪಾನ್‌ನಿಂದ ಮೋಟಾರ್ ಹಾಗೂ ಟರ್ಕಿಯಿಂದ ಸ್ಲೂಸ್ ವಾಲ್ವ್‌ಗಳು ಬಂದಿವೆ. ಆಸ್ಟ್ರೇಲಿಯಾದಿಂದ ಪಂಪ್ ಮಾನಿಟರಿಂಗ್ ಸಿಸ್ಟಮ್‌ಗಳು ಬಂದಿವೆ. ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಿಂದ ನೀರು ಶುದ್ಧೀಕರಣ ಮತ್ತು ಸೆನ್ಸಾರ್‌ಗಳು ಇನ್ನೂ ಬಂದಿಲ್ಲ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಂಕಿತ ಉಗ್ರರಿಗೆ ಟಾರ್ಗೆಟ್ ಆಗಿದ್ದ ಬೆಂಗಳೂರು: ಪೊಲೀಸ್ ಆಯುಕ್ತ ದಯಾನಂದ
“ಯೋಜನೆಗೆ ಒಂಬತ್ತು ವಿಭಿನ್ನ ಪ್ಯಾಕೇಜ್‌ಗಳೊಂದಿಗೆ ವಿಭಿನ್ನ ಗಡುವನ್ನು ನೀಡಲಾಗಿದೆ. 2020ರ ಅಂತ್ಯದ ವೇಳೆಗೆ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ. ಅಂತಿಮ ಪ್ಯಾಕೇಜ್‌ನ ಗಡುವು ಜುಲೈ 2023ರಲ್ಲಿ ಮುಕ್ತಾಯಗೊಂಡಿದೆ. ಸಾಂಕ್ರಾಮಿಕ ರೋಗ ಮತ್ತು ಕಾರ್ಮಿಕರ ಕೊರತೆಯಿಂದ ಎಲ್ಲ ಕೆಲಸಗಳು ವಿಳಂಬವಾಗಿದೆ. ರಾಜ್ಯದ ಎಲ್ಲ ಇನ್ಫ್ರಾ ಯೋಜನೆಗಳಂತೆ ಈ ಯೋಜನೆಗೆ ಆರು ತಿಂಗಳ ವಿಸ್ತರಣೆ ನೀಡಲಾಯಿತು. ಈಗ ಡಿಸೆಂಬರ್ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸುವ ಹಾದಿಯಲ್ಲಿದ್ದೇವೆ” ಎಂದು ಅವರು ಹೇಳಿದರು.
“ಪೈಪ್‌ಲೈನ್‌ಗಳನ್ನು ಹಾಕುವ ಕಾರ್ಯ ಪೂರ್ಣಗೊಂಡಿದೆ. ಟಿ.ಕೆ.ಹಳ್ಳಿಯಲ್ಲಿ 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ” ಎಂದರು.