ಸೇಲ್ಸ್ ಮ್ಯಾನೇಜರ್‌ವೊಬ್ಬರು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಕೊಠಡಿಗೆ ದಿಢೀರನೆ ನುಗ್ಗಿದ ದುಷ್ಕರ್ಮಿಗಳು, ಹಲ್ಲೆ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿ ಮೂಲದವರಾಗಿರುವ ಆರ್.ಅಣ್ಣಾದೊರೈ(41) ಅವರು ನಗರದ ವೈದ್ಯಕೀಯ ಉಪಕರಣಗಳ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದ 9ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ವಾಸವಿದ್ದರು. ಬುಧವಾರ ರಾತ್ರಿ 9.45ರ ಸುಮಾರಿಗೆ ಅಣ್ಣಾದೊರೈ ಅವರು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರೂಮಿಗೆ ನುಗ್ಗಿರುವ ದುಷ್ಕರ್ಮಿಗಳು ಅಣ್ಣಾದೊರೈ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ, ಅವರ ಬಳಿಯಿದ್ದ ₹1.5 ಲಕ್ಷ ಮೌಲ್ಯದ ಎರಡು ಮೊಬೈಲ್ ಹಾಗೂ ಒಂದು ಎಲೆಕ್ಟ್ರಾನಿಕ್ ಗ್ಯಾಜೆಟ್ ಅನ್ನು ದೋಚಿದ್ದಾರೆ. ನಂತರ ಅವರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನಗದನ್ನು ಕಳುಹಿಸುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಅಷ್ಟೊಂದು ಹಣ ಇಲ್ಲದಿದ್ದಾಗ ಆತನ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಗೆಳೆಯನ ಬಳಿ ಮಾತನಾಡಿಸಿ, ಆತನಿಂದ ₹25 ಸಾವಿರ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
“ಘಟನೆ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದೆ, ಹೀಗಾಗಿ ರೂಮ್ ಖಾಲಿ ಮಾಡಿದೆ. ನನ್ನನ್ನು ಕೊಲ್ಲಬೇಡಿ ಎಂದು ಆರೋಪಿಗಳ ಕಾಲಿಗೆ ಬೀಳುವ ಮೂಲಕ ಅಕ್ಷರಶಃ ಬೇಡಿಕೊಂಡಿದ್ದೇನೆ. ಆರೋಪಿಯು ಏಕಾಏಕಿ ಮನೆಗೆ ನುಗ್ಗಿ ಬಾಗಿಲಿಗೆ ಬೀಗ ಹಾಕಿದ್ದಾರೆ. ಆರೋಪಿಗಳು ಸುಮಾರು ಎರಡೂವರೆ ಗಂಟೆಗಳ ಕಾಲ ಕೋಣೆಯಲ್ಲಿದ್ದರು. ಕಟಿಂಗ್ ಪ್ಲೇಯರ್ ನನ್ನ ಹಣೆಯ ಮೇಲೆ ಎಸೆದಿದ್ದರಿಂದ, ಗಾಯವಾಗಿದೆ. ಹಾಗಾಗಿ, ಭಯಗೊಂಡು ಏನಾದರೂ ಆಗಿದೆಯೇ ಎಂದು ತಿಳಿದುಕೊಳ್ಳಲು ಸಿಟಿ ಸ್ಕ್ಯಾನ್ ಮಾಡಿಸಿದ್ದೇನೆ. ನಾನು ನನ್ನ ಊರಿಗೆ ಹೋಗಿದ್ದೆ ಮತ್ತು ನಡೆದ ಘಟನೆಯನ್ನು ಯಾರಿಗೂ ಹೇಳಿಲ್ಲ. ನಾನು ಕಳೆದ 15 ವರ್ಷಗಳಿಂದ ನಗರದಲ್ಲಿದ್ದೇನೆ. ಇದೇ ಮೊದಲ ಬಾರಿಗೆ ಇಂತಹ ಘಟನೆಯನ್ನು ಎದುರಿಸಿದ್ದೇನೆ” ಎಂದು ಸಂತ್ರಸ್ತ ಅಣ್ಣಾದೊರೈ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಣ್ಣು ಮಕ್ಕಳಿಬ್ಬರನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ದಂಪತಿ
“ಆರೋಪಿಗಳು ಪರಾರಿಯಾದ ನಂತರ ನಾನು ಪಕ್ಕದಲ್ಲೇ ಇರುವ ಮನೆಗೆಲಸದ ಮಹಿಳೆಯ ಮನೆಗೆ ಹೋಗಿ, ಅವರ ಮೊಬೈಲ್ ಫೋನ್‌ನಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಪೊಲೀಸರ ತಂಡ ನನ್ನನ್ನು ಭೇಟಿ ಮಾಡಿ ದೂರು ಸ್ವೀಕರಿಸಿದರು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು. ಪೊಲೀಸರು ಇಷ್ಟು ಬೇಗನೆ ಪ್ರತಿಕ್ರಿಯಿಸುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ” ಎಂದರು.
“ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರು ದೊಡ್ಡ ಗ್ಯಾಂಗ್‌ನ ಭಾಗವಾಗಿರುವ ಶಂಕೆ ಇದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಇದೀಗ ಐಪಿಸಿ ಸೆಕ್ಷನ್ 397 ಮತ್ತು ಐಸಿಪಿ ಸೆಕ್ಷನ್ 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.