ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದು ಹುಮ್ಮಸ್ಸಿನಲ್ಲಿರುವ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯಾಡಲು ಸಜ್ಜಾಗಿದೆ.
ಇಂದು(ಆಗಸ್ಟ್ 3) ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯ ಟ್ರಿನಿಡಾಡ್‌ನ ತರೂಬಾದಲ್ಲಿರುವ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಇಂದು ತನ್ನ 200ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಲಿದ್ದು ಇತಿಹಾಸ ನಿರ್ಮಿಸಲಿದೆ.
2006ರಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡಿತ್ತು. 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ದಾಖಲೆ ಬರೆದಿತ್ತು.
ಭಾರತ ತಂಡ ಇಲ್ಲಿಯವರೆಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳಲ್ಲಿ 25 ಪಂದ್ಯಗಳನ್ನಾಡಿದೆ. ಭಾರತ 17 ಪಂದ್ಯ ಜಯ ಗಳಿಸಿದರೆ, ವೆಸ್ಟ್ ಇಂಡೀಸ್ 7ರಲ್ಲಿ ಗೆಲುವು ಪಡೆದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸೇರಿದಂತೆ ಹಿರಿಯ ಆಟಗಾರರು ಟಿ20 ಕ್ರಿಕೆಟ್‌ನಿಂದ ಹೊರಗುಳಿದಿದ್ದು, ಯುವ ಪಡೆ ಇಂದು ಕಣಕ್ಕಿಳಿಯಲಿದೆ. 2024ರ ಟಿ20 ವಿಶ್ವಕಪ್‌ಗೆ ಬಲಿಷ್ಠ ಪಡೆ ಕಟ್ಟಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಲವು ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ. ಕೇವಲ ಟಿ20ಯಲ್ಲಿ ಮಿಂಚುತ್ತಿರುವ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ತಂಡದ ಉಪ ನಾಯಕರಾಗಿದ್ದಾರೆ.
ಸರಣಿ ಸೋಲದ ಪಾಂಡ್ಯ ಪಡೆ
ಪಾಂಡ್ಯ ನೇತೃತ್ವದಲ್ಲಿ ಭಾರತ ತಂಡ ಟಿ20 ಪಂದ್ಯಗಳ ಸರಣಿಯನ್ನು ಇಲ್ಲಿಯವರೆಗೂ ಸೋತಿಲ್ಲ. ಹಾರ್ದಿಕ್ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಭರ್ಜರಿ ಪ್ರದರ್ಶನ ನೀಡಿ ಆಡಿದ ಎಲ್ಲ ಸರಣಿಗಳನ್ನು ಗೆದ್ದಿದ್ದು ದಾಖಲೆಯನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಭಾರತ ತಂಡ 11 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 8 ಪಂದ್ಯಗಳಲ್ಲಿ ಗೆದ್ದಿದೆ. ಇಂದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಮುಖೇಶ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಯುವ ಆಟಗಾರರು ಇದ್ದಾರೆ.
ಈ ಸುದ್ದಿ ಓದಿದ್ದೀರಾ? ವೆಸ್ಟ್ ಇಂಡೀಸ್‌ಗೆ 6 ವಿಕೆಟ್ ಜಯ; ಭಾರತ ತಂಡದ ಕಳಪೆ ಪ್ರದರ್ಶನ
ಟೆಸ್ಟ್ ಸರಣಿಯಲ್ಲಿ ಆಡಿದ್ದ ಯಶಸ್ವಿ ಜೈಸ್ವಾಲ್ ಈಗಾಗಲೇ ಭರವಸೆ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಸ್ಫೋಟಕ ಆರಂಭಿಕನಾಗಿರುವ ಜೈಸ್ವಾಲ್, ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್ ಮತ್ತು ಯುಜುವೇಂದ್ರ ಚಹಾಲ್ ಅವರಿಗೂ ಈ ಸರಣಿ ಮಹತ್ವದ್ದಾಗಿದೆ.
ಇಂದಿನ ವೆಸ್ಟ್ ಇಂಡೀಸ್ ಟಿ20 ತಂಡವನ್ನು ರೊವ್ಮನ್ ಪೊವೆಲ್ ಮುನ್ನಡೆಸಲಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಮಿಂಚಿದ್ದ ಶಾಯ್ ಹೋಪ್ ಕೂಡ ತಂಡದಲ್ಲಿದ್ದಾರೆ. ಬ್ರೆಂಡನ್ ಕಿಂಗ್, ಶಿಮ್ರಾನ್ ಹೆಟ್ಮೆಯರ್ ಮತ್ತು ಕೈಲ್ ಮೇಯರ್ಸ್ ಅವರಂಥ ಸ್ಫೋಟಕ ಆಟಗಾರರು ತಂಡದಲ್ಲಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ್ದ ನಿಕೊಲಸ್ ಪೂರನ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಪಂದ್ಯವಾಡುವ ಉಭಯ ತಂಡಗಳ ಸಂಭಾವ್ಯ ಬಳಗ
ಭಾರತ:
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ / ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ಉಪ ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ನಾಯಕ), ತಿಲಕ್ ವರ್ಮ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್ / ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್
ವೆಸ್ಟ್ ಇಂಡೀಸ್:
ಕೈಲ್ ಮೇಯರ್ಸ್(ಉಪ ನಾಯಕ), ಜಾನ್ಸನ್ ಚಾರ್ಲ್ಸ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೇಯರ್, ರೋವ್ಮನ್ ಪೋವೆಲ್(ನಾಯಕ), ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಒಬೆದ್ ಮೆಕಾಯ್, ರೊಮಾರಿಯೊ ಶೆಫರ್ಡ್, ಒಡೆಯನ್ ಸ್ಮಿತ್, ಒಶಾನೆ ಥಾಮಸ್
ಪಂದ್ಯ ಆರಂಭ: ಸಂಜೆ 8ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಡಿಡಿ ಸ್ಪೋರ್ಟ್ಸ್, ಫ್ಯಾನ್‌ಕೋಡ್ ಆ್ಯಪ್