- ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಸಂತ್ರಸ್ತ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ನಡೆದ ಘಟನೆ
ಮಧ್ಯರಾತ್ರಿ ಚಲಿಸುತ್ತಿದ್ದ ಬೈಕ್‌ಗೆ ದುಷ್ಕರ್ಮಿಗಳು ಡಿಕ್ಕಿ ಹೊಡೆದು ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಮುಖ್ಯರಸ್ತೆಯಲ್ಲಿ ನಡೆದಿದೆ.
ಆರ್ ಟಿ ನಗರದ ಕಾವಲ್ ಭೈರಸಂದ್ರದ ನಿವಾಸಿ ರಾಹುಲ್ ಕನಿಕನ್(26) ಸಂತ್ರಸ್ತ. ಐಟಿಸಿ ಕಂಪನಿ ಎದುರು ಬುಧವಾರ(ಜುಲೈ 26) ಮಧ್ಯರಾತ್ರಿ 12.30ರಿಂದ 1ರ ನಡುವೆ ಈ ಘಟನೆ ನಡೆದಿದೆ.
ಆನ್‌ಲೈನ್ ಕೋರ್ಸ್ ಓದುತ್ತಿರುವ ಸಂತ್ರಸ್ತ ರಾಹುಲ್ ಸಂಜೆ 4 ಗಂಟೆ ಸುಮಾರಿಗೆ ದೊಡ್ಡ ಬಾಣಸವಾಡಿ ಮುಖ್ಯರಸ್ತೆಯ ಮುಕುಂದ ಥಿಯೇಟರ್ ಬಳಿಯಿರುವ ತನ್ನ ಸ್ನೇಹಿತರ ಮನೆಗೆ ಅಧ್ಯಯನಕ್ಕೆ ತೆರಳಿದ್ದರು. ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಮೂವರು ಆರೋಪಿಗಳು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಬೀಳಿಸಿದ್ದಾರೆ.
ಬೈಕ್‌ನಿಂದ ಕೆಳಗೆ ಬಿದ್ದ ರಾಹುಲ್‌ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಗ ಆರೋಪಿಗಳು ಹಣ ಕೊಡುವಂತೆ ಚಾಕು ತೋರಿಸಿ ಬೆದರಿಸಿದ್ದಾರೆ. ಈ ವೇಳೆ ಭಯಗೊಂಡ ಸಂತ್ರಸ್ತ ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಅಪಾರ್ಟ್‌ಮೆಂಟ್‌ನ ಸಮುಚ್ಚಯವೊಂದಕ್ಕೆ ಓಡಿ ಹೋಗಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ರಾಹುಲ್‌ನ ಬೈಕ್ ಹಾಗೂ ಜೇಬಿನಿಂದ ಬಿದ್ದಿದ್ದ ಮೊಬೈಲ್‌ನೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ.
ಸ್ವಲ್ಪ ದೂರದವರೆಗೆ ಬೈಕ್ ತೆಗೆದುಕೊಂಡು ಹೋದ ಆರೋಪಿಗಳು ಅದನ್ನು ಮೇಲ್ಸೇತುವೆ ಬಳಿಯ ಪಾದಚಾರಿ ಮಾರ್ಗದಲ್ಲಿ ಬಿಟ್ಟು ಹೋಗಿದ್ದರು. ಬೆಳಗ್ಗೆ ಕೃತ್ಯ ನಡೆದ ಸ್ಥಳಕ್ಕೆ ಸಂತ್ರಸ್ತ ಮತ್ತು ಆತನ ತಂದೆ ಬಂದು ನೋಡಿದಾಗ ಬೈಕ್ ಪತ್ತೆಯಾಗಿದೆ.
“ಘಟನೆಯಿಂದಾಗಿ ನನ್ನ ಮಗ ತೀವ್ರವಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಾನೆ. ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ದೊಡ್ಡ ಅನಾಹುತ ನಡೆದಿಲ್ಲ. ಇಂತಹ ಘಟನೆಯನ್ನು ನಾವು ಎದುರಿಸುತ್ತಿರುವುದು ಇದೇ ಮೊದಲು” ಎಂದು ರಾಹುಲ್ ತಂದೆ ಮುರಳಿ ಕನಿಕನ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಸದಾಗಿ ನಿರ್ಮಿಸಿರುವ ರಸ್ತೆಗಳಲ್ಲಿ ಗುಂಡಿಗಳು; ನಿವಾಸಿಗಳ ಆಕ್ರೋಶ
“ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬ ಚಾಕು ಹಿಡಿದುಕೊಂಡಿದ್ದ ಹಾಗೂ ಅವರೆಲ್ಲರೂ 20 ರಿಂದ 22 ವರ್ಷ ವಯಸ್ಸಿನವರು ಎಂದು ಸಂತ್ರಸ್ತ ಮಾಹಿತಿ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪುಲಕೇಶಿನಗರ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದಾರೆ.