ಬೆಂಗಳೂರಿನ ಶೇಷಾದ್ರಿಪುರದ ಜೆ.ಪಿ.ಭವನ ಜನತಾದಳ (ಜೆಡಿಎಸ್) ಕಚೇರಿ ಕಂಪೌಂಡ್ ಗೋಡೆಯ ಮೇಲೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಆಗಿ ಪೋಸ್ಟರ್ ಅಂಟಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್‌ಗೌಡ ನೀಡಿದ ದೂರಿನ ಮೇರೆಗೆ ಬಿಂದು, ನವೀನ್‌ಗೌಡ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ದೀಪಾವಳಿ ಹಬ್ಬದ ಹಿನ್ನೆಲೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆಪಿ ನಗರದಲ್ಲಿರುವ ಮನೆಗೆ ದೀಪಾಲಂಕಾರ ಮಾಡಲಾಗಿತ್ತು. ರಸ್ತೆ ಬದಿ ಇರುವ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ವಿಡಿಯೋ ಜತೆಗೆ ಟ್ವೀಟ್ ಮಾಡಿತ್ತು.
ವಿದ್ಯುತ್ ಕಳವು ಆರೋಪದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ನಡುವೆ ನವೆಂಬರ್ 14ರಂದು ರಾತ್ರಿ 10 ಗಂಟೆ ಸುಮಾರಿಗೆ ಕಿಡಿಗೇಡಿಗಳು ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’, ʼಕರೆಂಟ್ ಕಳ್ಳ ಕುಮಾರಸ್ವಾಮಿʼ ಎಂದು ಅವಹೇಳನಕಾರಿ ಬರಹವುಳ್ಳ ಪೋಸ್ಟರ್‌ಗಳನ್ನು ಶೇಷಾದ್ರಿಪುರದ ಜೆ.ಪಿ. ಭವನ (ಜೆಡಿಎಸ್ ಕಚೇರಿ) ಕಂಪೌಂಡ್ ಮೇಲೆ ಅಂಟಿಸಿ ಪರಾರಿಯಾಗಿದ್ದಾರೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಅವರು ಆರೋಪಿಸಿ ಠಾಣೆಗೆ ದೂರು ನೀಡಿದ್ದರು.
ಕುಮಾರಸ್ವಾಮಿ ಕರೆಂಟ್ 200 ಯುನಿಟ್ ಮಾತ್ರ ಉಚಿತ ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ. ಕರೆಂಟ್ ಕದ್ದರೂ ಎಚ್‌ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುರುವಾರ ಬೆಳ್ಳಂಬೆಳಗ್ಗೆ ಡ್ರೈ ಫ್ರೂಟ್ಸ್ ಅಂಗಡಿ, ಮಾಲೀಕರ ಮನೆ ಮೇಲೆ ಐಟಿ ದಾಳಿ
ಆ ದಿನ ರಾತ್ರಿ ಆಟೋದಲ್ಲಿ ಬಂದ ಅಪರಿಚಿತರು ಜೆಡಿಎಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಭದ್ರತಾ ಸಿಬ್ಬಂದಿ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಹಾದೇವ್ ರುವಾನಿಯವರನ್ನು ನಿಂದಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನವೀನ್‌ಗೌಡ ಹಾಗೂ ಬಿಂದು ಕೀಳುಮಟ್ಟದಲ್ಲಿ ಪೋಸ್ಟ್ ಹರಿಯಬಿಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪೋಸ್ಟರ್ ಕುರಿತು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ನವೆಂಬರ್ 14ರಂದು ರಾತ್ರಿಯೇ ಪೋಸ್ಟರ್ ತೆರವುಗೊಳಿಸಿದ್ದರು.