ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದಾದರ ಮೇಲೊಂದರಂತೆ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇದೀಗ, ಬೆಂಗಳೂರಿನ ಕುಂಬಾರಪೇಟೆಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದೆ. ನ.19 ರ ಮಧ್ಯಾಹ್ನ ಬೆಂಕಿ ವ್ಯಾಪಿಸಿದೆ. ನ.20 ರ ಬೆಳಿಗ್ಗೆಯವರೆಗೂ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿದಿದೆ.
ಆದಿಲ್ ಎಂಬುವವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮು ಇದಾಗಿದೆ. ಕೆ.ಆರ್. ಮಾರ್ಕೆಟ್ ಠಾಣಾ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಭಾನುವಾರ ಮಧ್ಯಾಹ್ನ ಈ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿ 3 ಅಂತಸ್ತು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ನೀರು ಹಾಕಿದಷ್ಟು ಹೆಚ್ಚಾಗಿ ಬೆಂಕಿ ಹೊತ್ತಿ ಉರಿಯುತ್ತಿದೆ.
ಮೊದಲಿಗೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ನಂತರ ನಾಲ್ಕನೇ ಮಹಡಿಗೂ ಈ ಬೆಂಕಿ ವ್ಯಾಪಿಸಿದೆ. ಬೆಂಕಿ ಹತ್ತಿರುವ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಸ್ಥಳೀಯರು ಕೂಡಲೇ ಮಾಹಿತಿ ನೀಡಿದರು ಸಹ ಸಿಬ್ಬಂದಿ ಒಂದು ಗಂಟೆಯಾದರೂ ಘಟನಾ ಸ್ಥಳಕ್ಕೆ ಬಂದಿರಲಿಲ್ಲ. ಇದರಿಂದ ಕ್ಷಣಕ್ಷಣಕ್ಕೂ ಬೆಂಕಿಯ ವ್ಯಾಪ್ತಿ ಹೆಚ್ಚಾಗುತ್ತಿತ್ತು.
ನಂತರ, ತಡವಾಗಿ ಐದು ವಾಹನಗಳಲ್ಲಿ ಬಂದ 30 ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಆದರೆ, ಬೆಂಕಿ ಧಗಧಗಿಸಿದ ಪರಿಣಾಮ ಮೂರನೇ ಮಹಡಿಯಿಂದ ಆರನೇ ಮಹಡಿಗೆ ಬೆಂಕಿ ಹಬ್ಬಿದೆ. ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಕಟ್ಟಡದ ಗೋಡೆ ಒಡೆದು ನೀರು ಹಾಯಿಸಿ ಅಗ್ನಿ ಜ್ವಾಲೆಯನ್ನು ನಿಯಂತ್ರಣಕ್ಕೆ ತರುವ ಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮಾಡಿದರು.
ಇನ್ನು ಮೂರು ಮಹಡಿಗಳಿಗೆ ಚಾಚಿದ್ದ ಬೆಂಕಿ ನಂದಿಸುವಷ್ಟರಲ್ಲಿ ನೀರು ಖಾಲಿಯಾಗಿದೆ. ಬಳಿಕ ಬೆಂಕಿ ನಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಅಗ್ನಿಶಾಮಕ ದಳದ 70 ಸಿಬ್ಬಂದಿ ಕಟ್ಟಡದಲ್ಲಿ ಹೊತ್ತಿದ್ದ ಬೆಂಕಿ ನಂದಿಸಲು ಮಧ್ಯಾಹ್ನದಿಂದ ತಡರಾತ್ರಿಯವರೆಗೂ ನಿರಂತರವಾಗಿ ಕಾರ್ಯಾಚರಣೆ ನಡೆಸಿದರು. ಆದರೆ, ನ.20ರಂದು ಸಹ ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು: ಪಾದಚಾರಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ, 9 ತಿಂಗಳ ಮಗು ಸಾವು
ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವೇಳೆ, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಈ ಗೋದಾಮಿನಲ್ಲಿ ಮಕ್ಕಳ ಆಟದ ಸಾಮಾನು, ಎಲೆಕ್ಟ್ರಾನಿಕ್ ವಸ್ತುಗಳನ್ನ ಇಡಲಾಗಿತ್ತು. ಕಟ್ಟದಲ್ಲಿರುವ ವಸ್ತುಗಳೆಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿವೆ.
ಓರ್ವ ಮಹಿಳೆ ರಕ್ಷಣೆ
ಬೆಂಕಿ ಅವಘಡದಿಂದ ಕವಿತ ಎನ್ನುವ ಮಹಿಳೆ ಪಾರಾಗಿದ್ದಾರೆ. ನಾಲ್ಕು, ಐದು ಮತ್ತು ಆರನೇ ಅಂತಸ್ತು ಸುಟ್ಟು ಕರಕಲಾಗಿದೆ. ಪ್ಲಾಸ್ಟಿಕ್ ಆಟಿಕೆ ವಸ್ತು ಗೋಡೌನ್‌ನಲ್ಲಿ ಕವಿತಾ ಅವರ ಪತಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ, ಇವರಿಗೆ ಐದನೇ ಮಹಡಿಯಲ್ಲಿ ವಾಸಿಸಲು ಮನೆಕೊಟ್ಟಿದ್ದರು. ಈ ಅಗ್ನಿ ಅವಘಡ ಸಂಭವಿಸಿದಾಗ ಕವಿತಾ ಎಂಬ ಮಹಿಳೆ ಐದನೇ ಮಹಡಿಯಲ್ಲಿರುವ ತಮ್ಮ ಮನೆಯಲ್ಲಿ ಇದ್ದರು. ಕೆಳಗಡೆ ಮಹಡಿಯಲ್ಲಿ ಅಗ್ನಿ ಸಂಭವಿಸಿದ ಹಿನ್ನೆಲೆ, ಕೆಳಗೆ ಹೋಗಲು ಆಗದೇ ಇದ್ದಾಗ, ಮೆಲಗಡೆ ಆರನೇ ಮಹಡಿಗೆ ತೆರಳಿದ್ದಾರೆ.
ಈ ವೇಳೆ, ಸ್ಥಳೀಯರು ಸೀರೆ ಮತ್ತು ಹಗ್ಗದ ಸಹಾಯದಿಂದ ಕವಿತಾ ಅವರನ್ನು ರಕ್ಷಿಸಿದ್ದಾರೆ.