- ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಪತಿ ಕಾಟ ತಾಳಲಾಗದೆ ಮೈದುನನಿಗೆ ಕರೆ ಮಾಡಿದ್ದ ಸಂಧ್ಯಾ
ಕುಡಿದು ಬಂದು ನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಅಣ್ಣನಿಗೆ ಸ್ವಂತ ತಮ್ಮನೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ಬೆಂಗಳೂರಿನ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಕಾರ್ತಿಕ್ (30) ಕೊಲೆಯಾದ ದುರ್ದೈವಿ. ಕೊಲೆ ಆರೋಪಿ ಹಾಗೂ ಕಾರ್ತಿಕ್‌ನ ತಮ್ಮ ವಿಜಯ್, ಇಬ್ಬರು ಸಹೋದರರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಕೊಲೆಯಾದ ಕಾರ್ತಿಕ್ ಹಾಗೂ ಪತ್ನಿ ಸಂಧ್ಯಾ ಇಬ್ಬರು ನಗರದ ದೊಡ್ಡಗುಂಟೆಯಲ್ಲಿ ನೆಲೆಸಿದ್ದರು. ನಿತ್ಯ ಕಾರ್ತಿಕ್ ಕುಡಿದುಕೊಂಡು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಇದರಿಂದ ಬೇಸತ್ತಿದ್ದ ಸಂಧ್ಯಾ ಕಾರ್ತಿಕ್‌ನ ತಮ್ಮನಿಗೆ ಕರೆ ಮಾಡಿ ಮನೆಗೆ ಬಂದು ಬುದ್ಧಿವಾದ ಹೇಳುವಂತೆ ಕೇಳಿದ್ದಳು.
ಕಾರ್ತಿಕ್‌ನು ನಿತ್ಯ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ದಂಪತಿಯ ಮಧ್ಯೆ ಮನಸ್ತಾಪ ಬೆಳೆದಿತ್ತು. ಪತಿ ಕಾಟ ತಾಳಲಾಗದೆ ಸಂಧ್ಯಾ ಮೈದುನನಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಳು.
ಕಾರ್ತಿಕ್‌ನ ತಮ್ಮ ವಿಜಯ್ ಬೇರೆಡೆ ವಾಸವಿದ್ದನು. ಅತ್ತಿಗೆ ಕರೆ ಮಾಡಿದ ಹಿನ್ನೆಲೆ, ಮಂಗಳವಾರ ಮಧ್ಯಾಹ್ನ ದೊಡ್ಡಗುಂಟೆಯಲ್ಲಿರುವ ಅಣ್ಣನ ಮನೆಗೆ ತಮ್ಮ ವಿಜಯ್ ತೆರಳಿದ್ದನು.
ಈ ಸುದ್ದಿ ಓದಿದ್ದೀರಾ? ಮೂರನೇ ದಿನ ಶಕ್ತಿ ಯೋಜನೆಯ ಲಾಭ ಪಡೆದ 51 ಲಕ್ಷ ಮಹಿಳೆಯರು
ಈ ವೇಳೆ ಸಹೋದರರ ಮಧ್ಯೆ ಜಗಳವಾಗಿದೆ. ಸೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ಗಲಾಟೆಯ ವೇಳೆ ತಮ್ಮ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಆರೋಪಿಯನ್ನು ಪುಲಕೇಶಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.