- ವರದಕ್ಷಿಣೆ ನೀಡಲು ಒಪ್ಪದಿದ್ದಾಗ ಕಿರುಕುಳ ನೀಡಿದ ಕುಟುಂಬಸ್ಥರು
- ವಿಷ ಸೇವಿಸಿದಾಗ ತಡೆಯದೇ ಸಾಯುವಂತೆ ಪ್ರೇರೇಪಿಸಿದ್ದಾರೆಂದು ಆರೋಪ
ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್ ವಿರುದ್ಧ ಪತ್ನಿ ವಂದನಾ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐಎಎಸ್ ಅಧಿಕಾರಿ ಆಕಾಶ್ ಹಾಗೂ ನಿವೃತ್ತ ಡಿಐಜಿ ಪುತ್ರಿ ವಂದನಾ 2022ರ ಜೂನ್‌ನಲ್ಲಿ ಮದುವೆಯಾಗಿದ್ದರು. “ಮದುವೆ ಸಮಯದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಆದರೂ, ಬೆಂಗಳೂರಿನಲ್ಲಿ ಮನೆ ಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನಿಟ್ಟು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ಜತೆಗೆ ಹಲ್ಲೆ ಮಾಡುತ್ತಿದ್ದಾರೆ” ಎಂದು ವಂದನಾ ಆರೋಪಿಸಿದ್ದಾರೆ.
“ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ನಾನು ಐಎಎಸ್ ಅಧಿಕಾರಿ ಕನಿಷ್ಠ ₹100 ಕೋಟಿ ಆಸ್ತಿಯನ್ನಾದರೂ ಪಡೆದು ಮದುವೆಯಾಗಬಹುದಿತ್ತೆಂದು ಹಿಯಾಳಿಸಿದ್ದಾರೆ. ವರದಕ್ಷಿಣೆ ನೀಡಲು ಒಪ್ಪದಿದ್ದಕ್ಕೆ ಕಿರುಕುಳ ನೀಡುತ್ತಿದ್ದಾರೆ. ಮಹಿಳಾ ಐಎಎಸ್ ಅಧಿಕಾರಿಯೊಬ್ಬರೊಂದಿಗೆ ಫೋನ್ ಕರೆಗಳ ಮಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಇದರಿಂದ ಬೇಸತ್ತು ವಿಷ ಸೇವಿಸಿದಾಗ ತಡೆಯದೇ ಸಾಯುವಂತೆ ಪ್ರೇರೇಪಿಸಿದ್ದಾರೆ. ಆನಂತರ ಇದು ವಿಷಪೂರಿತ ಆಹಾರ ಸೇವನೆಯಿಂದ ಆದ ಪ್ರಕರಣ ಎಂದು ಬದಲಿಸಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂದನಾ ಅವರ ದೂರಿನ ಮೇರೆಗೆ ಮೈಸೂರಿನ ನಿವಾಸಿಯೂ ಆಗಿರುವ ಐಎಎಸ್ ಅಧಿಕಾರಿ ಆಕಾಶ್, ತಂದೆ ನಿವೃತ್ತ ಅಧಿಕಾರಿ ಶಂಕರ್, ತಾಯಿ ಚಂದ್ರಿಕಾ ಹಾಗೂ ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ಸಹೋದರ ವಿಕಾಸ್ ಶಂಕರ್ ವಿರುದ್ಧ ಪುಲಕೇಶಿ ಉಪವಿಭಾಗ ವ್ಯಾಪ್ತಿಯ ಪೂರ್ವ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೊಳಚೆ ನೀರಿನಿಂದ ಮೀನುಗಳ ಮಾರಣಹೋಮ
ದೂರಿನ ಹಿನ್ನೆಲೆಯಲ್ಲಿ 488(ಎ), 323, 504, 506 ಅಡಿ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.