ರಾಜ್ಯ ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು ಬಂದ ಹಿನ್ನೆಲೆ, ಲೋಕಾಯುಕ್ತ ಅಧಿಕಾರಿಗಳು 10 ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು 10 ತಂಡಗಳಾಗಿ ಪ್ರತ್ಯೇಕವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಕೆ.ಸಿ. ಜನರಲ್ ಆಸ್ಪತ್ರೆ, ಐಜಿಪಿ ಸುಬ್ರಮಣ್ಯೇಶ್ವರರಾವ್ ವಾಣಿ ವಿಲಾಸ್ ಹಾಗೂ ಸಂಜಯ್ ಗಾಂಧಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲಮಂಗಲ, ಯಲಹಂಕ, ಕೆ.ಆರ್.ಪುರ, ಜಯನಗರ, ಕೆ.ಸಿ.ಜನರಲ್ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಇಂದಿರಾಗಾಂಧಿ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಗೌಸಿಯಾ ಆಸ್ಪತ್ರೆ ಹಾಗೂ ವಾಣಿವಿಲಾಸ್ ಆಸ್ಪತ್ರೆಗಳಿಗೆ ಏಕಕಾಲದಲ್ಲಿ ಅಧಿಕಾರಿಗಳು ಪ್ರತ್ಯೇಕ ತಂಡಗಳಾಗಿ ಭೇಟಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಾಡಾಳು ವಿರೂಪಾಕ್ಷಪ್ಪ ಲಂಚ ಪ್ರಕರಣ ಮರು ತನಿಖೆಗೆ ಎಎಪಿ ಆಗ್ರಹ
ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ವಿಳಂಬ, ಹೆಚ್ಚಿನ ಹಣ ಪಡೆಯುವುದು, ರೋಗಿಗಳ ಜತೆಗೆ ಅನುಚಿತ ವರ್ತನೆ, ಅವಧಿ ಮೀರಿದ ಔಷಧಿ ವಿತರಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ, ಪರಿಶೀಲನೆ ನಡೆಸಿದ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅಧಿಕಾರಿಗಳ ತಂಡ ಗೌಪ್ಯ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದೆ.
ಲೋಕಾಯುಕ್ತ ಅಧಿಕಾರಿಗಳು ನಗರದ 10 ಸರ್ಕಾರಿ ಆಸ್ಪತ್ರೆಗಳಿಗೆ ಏಕಕಾಲಕ್ಕೆ ಭೇಟಿ ನೀಡಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಸೌಲಭ್ಯದಲ್ಲಿ ಆಗುತ್ತಿರುವ ಅಕ್ರಮದ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದಿದ್ದಾರೆ.