ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್ಪಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ನಕಲಿ ಬ್ರ್ಯಾಂಡ್ ಬಟ್ಟೆ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಗೋದಾಮು ಮತ್ತು ವ್ಯಾಪಾರಸ್ಥರ ಅಂಗಡಿಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ಬೊಮ್ಮನಹಳ್ಳಿಯ ಪಟೇಲ್ ಎಕ್ಸ್‌ಪರ್ಟ್ ಹಾಗೂ ಆರ್‌ಬಿ ಫ್ಯಾಷನ್ ಗೋಡೌನ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಪರಿಶೀಲನೆ ವೇಳೆ, ಎಸ್.ಆರ್.ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಹಲವು ಗೋದಾಮುಗಳಲ್ಲಿ ಬ್ರ್ಯಾಂಡ್ ಹೆಸರಿನಡಿ ನಕಲಿ ಬಟ್ಟೆಗಳನ್ನು ತಯಾರು ಮಾಡುತ್ತಿರುವುದು ತಿಳಿದುಬಂದಿದೆ.
ನಕಲು ಬ್ರ್ಯಾಂಡ್ ಬಟ್ಟೆ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಭರತ್ ಕುಮಾರ್, ರಾಧಾ ಎಂಬವರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್; ಸಾವು
ನಕಲಿ ಬ್ರ್ಯಾಂಡ್ ಸಿಗರೇಟ್ ಜಪ್ತಿ
ಕೆ.ಆರ್.ಮಾರ್ಕೆಟ್ ಬಳಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಐಟಿಸಿ ಬ್ರಾಂಡ್, ಬ್ಲಾಕ್, ಮಾಂಡ್, ಸಿಗರ್ ಎಸ್ಸೆಲೈಟ್ಸ್ ಸೇರಿ ಹಲವಾರು ವಿದೇಶಿ ಬ್ರಾಂಡ್‌ಗಳ ನಕಲಿ ಸಿಗರೇಟ್‌ಗಳು ಪತ್ತೆಯಾಗಿವೆ.
ಈ ಸಿಗರೇಟ್‌ಗಳನ್ನು ಸೀಕ್ರೆಟ್ ಚೇಂಬರ್ನಲ್ಲಿ ಶೇಖರಣೆ ಮಾಡಿ ಇಡಲಾಗಿತ್ತು. ಇದೀಗ ಸಿಸಿಬಿ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ನಕಲಿ ಸಿಗರೇಟ್‌ಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಿಗರೇಟ್‌ಗಳನ್ನು ಸಹ ನಕಲಿ ಬ್ರ್ಯಾಂಡ್ ಬಳಸಿ ಜನರಿಗೆ ಮಾರಾಟ ಮಾಡುತ್ತಿದ್ದರು. ಜತೆಗೆ ಅಕ್ರಮ ಹುಕ್ಕಾ ಜಾರ್ಗಳು ಪತ್ತೆಯಾಗಿವೆ.
ಈ ಘಟನೆ ಸಂಬಂಧ ಲಲಿತ್ ಎಂಬಾತನ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.