ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೆ ಹೆಚ್ಚಾಗಿ ನಡೆಯುತ್ತಿವೆ. ಇದೀಗ ಅಡುಗೆ ಭಟ್ಟನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ನಡೆದಿದೆ.
ರವಿ ಭಂಡಾರಿ(44) ಕೊಲೆಯಾದ ದುರ್ದೈವಿ. ಈತ ರಾಜಾಜಿನಗರದ ಪಿಜಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ರಾಹುಲ್ ಎಂಬಾತ ಕೃತ್ಯ ಎಸಗಿದ ವ್ಯಕ್ತಿ. ಆರೋಪಿ ತಾಯಿ ಪದ್ಮಾವತಿ ಅದೇ ಪಿಜಿಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು.
ಆರೋಪಿ ತಾಯಿ ಪದ್ಮಾವತಿ ಹಾಗೂ ಮೃತ ಅಡುಗೆ ಭಟ್ಟ ಇಬ್ಬರು ಒಂದೇ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾತಾಡಿಕೊಂಡು ಅನ್ಯೋನ್ಯವಾಗಿ ಕೆಲಸ ಮಾಡುತ್ತಿದ್ದರು. ಇದನ್ನು ತಪ್ಪಾಗಿ ಗ್ರಹಿಸಿದ ಆರೋಪಿ ಮಗ ರವಿ ಭಂಡಾರಿಗೆ ಕರೆ ಮಾಡಿ ಮಾತಾಡಬೇಕು ಎಂದು ಮನೆಗೆ ಕರೆಸಿಕೊಂಡಿದ್ದಾನೆ. ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೊಹರಂ ಹಬ್ಬ; ಹಲವೆಡೆ ಸಂಚಾರ ಮಾರ್ಗ ಬದಲಾವಣೆ
ಇನ್ನು ಈ ಘಟನೆ ನಡೆದಾಗ ತಾಯಿ ಪದ್ಮಾವತಿ ಪಿಜಿಯಲ್ಲಿದ್ದರು. ಆರೋಪಿ ಅಡುಗೆ ಭಟ್ಟನನ್ನು ಹತ್ಯೆ ಮಾಡಿ ಮೊಬೈಲ್ ಸ್ವಿಚ್ಆಫ್ ಮಾಡಿ ಪರಾರಿಯಾಗಿದ್ದಾನೆ.
ಈ ಘಟನೆ ಕುರಿತಂತೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.