ಬರೋಬ್ಬರಿ 2 ಕೆಜಿ ತೂಕದ ₹20 ಕೋಟಿ ಮೌಲ್ಯದ ಕೊಕೇನ್ ಅನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯಾ ಏರ್ಲೈನ್ಸ್‌ನಲ್ಲಿ ಬೆಂಗಳೂರಿಗೆ ಡಿಸೆಂಬರ್ 11ರಂದು ಆಗಮಿಸಿದ್ದನು. ಆತನ ಹೊಟ್ಟೆಯಲ್ಲಿ ಸುಮಾರು 99 ಕೊಕೇನ್ ಕ್ಯಾಪ್ಸೂಲ್ಸ್ ಪತ್ತೆಯಾಗಿವೆ.
ಕ್ಯಾಪ್ಸೂಲ್‍ಗಳಲ್ಲಿ ಕೊಕೇನ್ ತುಂಬಿ ಅದನ್ನು ಆರೋಪಿ ನುಂಗಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು. ಬಳಿಕ, ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್‍ಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು 99 ಕ್ಯಾಪ್ಸುಲ್‌ಗಳಲ್ಲಿ ಬಚ್ಚಿಟ್ಟಿದ್ದ 2 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.
ವರದಿ ಪ್ರಕಾರ, 5 ದಿನಗಳ ಕಾಲ ಆತನನ್ನು ಆಸ್ಪತ್ರೆಯಲ್ಲಿ ಇರಿಸಿ 99 ಕೊಕೇನ್ ಕ್ಯಾಪ್ಸುಲ್‌ಗಳನ್ನು ಹೊರ ತೆಗೆಯಲಾಗಿದೆ. ನೈಜೀರಿಯಾ ಪ್ರಜೆ ವೈದ್ಯಕೀಯ ಚಿಕಿತ್ಸೆ ವೀಸಾದಲ್ಲಿ ಭಾರತಕ್ಕೆ ಬಂದಿರುವುದಾಗಿ ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೌಡಿಶೀಟರ್, ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆ ಮೇಲೆ ಸಿಸಿಬಿ ದಾಳಿ
ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಅತಿದೊಡ್ಡ ಕೊಕೇನ್ ಡ್ರಗ್ ಸರಬರಾಜು ಯತ್ನ ಇದಾಗಿದೆ.