- ಇಥಿಯೋಪಿಯಾದಿಂದ ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ಆರೋಪಿ
- ಆಹಾರವನ್ನು ಸೇವಿಸಲು ಹಿಂಜರಿದಾಗ ಪೊಲೀಸರಿಗೆ ಶಂಕಿತ ನೈಜೀರಿಯನ್ ವ್ಯಕ್ತಿ
ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹11 ಕೋಟಿ ಮೌಲ್ಯದ 1 ಕೆಜಿ ಕೊಕೇನ್ ಅನ್ನು ಕ್ಯಾಪ್ಸೂಲ್‌ಗಳ ಮೂಲಕ ನುಂಗಿ ಹೊಟ್ಟೆಯಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ನೈಜೀರಿಯನ್ ವ್ಯಕ್ತಿಯನ್ನು ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
40 ವರ್ಷದ ಬಂಧಿತ ವ್ಯಕ್ತಿ ಇಥಿಯೋಪಿಯಾದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಏ. 28ರಂದು ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ವೀಸಾ ಪಡೆದುಕೊಂಡಿದ್ದ.
ವಿಮಾನ ನಿಲ್ದಾಣದ ತನಿಖಾಧಿಕಾರಿಗಳು ವಿದೇಶಿ ಪ್ರಯಾಣಿಕರ ಪ್ರೊಫೈಲ್ ಅನ್ನು ಪರಿಶೀಲನೆ ನಡೆಸುವ ವೇಳೆ, ಆತ ತನ್ನ ದೇಹವನ್ನು ಬಳಸಿಕೊಂಡು ಮಾದಕವಸ್ತು ಕಳ್ಳ ಸಾಗಿಸುತ್ತಿರಬಹುದು ಎಂದು ಆ ಆಫ್ರಿಕನ್ ವ್ಯಕ್ತಿಯ ಮೇಲೆ ಅನುಮಾನಗೊಂಡು, ತಡೆದು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ. ತನಿಖಾಧಿಕಾರಿಗಳು ಅವನಿಗೆ ನೀರು ಮತ್ತು ಆಹಾರವನ್ನು ಸೇವಿಸಲು ನೀಡಿದ್ದಾರೆ.
ಶಂಕಿತ ವ್ಯಕ್ತಿ ನೀರು ಮತ್ತು ಆಹಾರವನ್ನು ಸೇವಿಸಲು ನಿರಾಕರಿಸಿದ. ಆಹಾರ ಸೇವಿಸಿದರೆ ತನ್ನ ದೇಹದೊಳಗಿನ ಡ್ರಗ್ ಕ್ಯಾಪ್ಸೂಲ್‌ಗಳು ಸಿಡಿದು ಮಾರಣಾಂತಿಕ ಪರಿಣಾಮ ಉಂಟುಮಾಡಬಹುದು ಎಂದು ಭಯಪಟ್ಟು ಆತ ಊಟ ಮಾಡಲು ನಿರಾಕರಿಸಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್; ಮುಂದಿನ ‘ಡಿಜಿ-ಐಜಿಪಿ’ ಯಾರು?
ಶಂಕಿತನ ಗಾಬರಿ ಕಂಡು ಡಿಆರ್‌ಐ ತಂಡವು ವ್ಯಕ್ತಿ ಮಾದಕ ದ್ರವ್ಯವನ್ನು ಹೊಂದಿರಬಹುದು ಎಂದು ಖಚಿತಪಡಿಸಿಕೊಂಡಿತು. ಅವರು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಎಕ್ಸ್-ರೇ ಮಾಡಿಸಿದರು. ಬಳಿಕ ಅವನ ಹೊಟ್ಟೆಯಲ್ಲಿ 64 ಕ್ಯಾಪ್ಸೂಲ್‌ಗಳು ಇರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಡಿಆರ್‌ಐ ನೈಜೀರಿಯನ್ ವ್ಯಕ್ತಿಯನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದು, ಇದೀಗ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.