- ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- ಬೆಂಗಳೂರಿನ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲು
ಉತ್ತರ ಬೆಂಗಳೂರಿನ ಆರ್ಟಿ ನಗರದ ಎಂಎಲ್ಎ ಲೇಔಟ್ನಲ್ಲಿ ಸೋಮವಾರ ಮಧ್ಯರಾತ್ರಿ 2.30ರ ಸುಮಾರಿಗೆ ಪುಡಿ ರೌಡಿಯೊಬ್ಬ 54 ವರ್ಷದ ಸೆಕ್ಯೂರಿಟಿ ಗಾರ್ಡ್ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಸೆಕ್ಯೂರಿಟಿ ಗಾರ್ಡ್ ಆಲ್ಬರ್ಟ್ ಹಲ್ಲೆಗೊಳಗಾದ ವ್ಯಕ್ತಿ. ಇವರು ಎಂಎಲ್ಎ ಲೇಔಟ್ 1ನೇ ಮುಖ್ಯರಸ್ತೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿತ್ಯದಂತೆ ಸೋಮವಾರ ಮಧ್ಯರಾತ್ರಿ ಕರ್ತವ್ಯದಲ್ಲಿದ್ದಾಗ 2:30ರ ಸುಮಾರಿಗೆ ಸುಮಾರು 25 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಅಲ್ಬರ್ಟ್ ಅವರು ಕುಳಿತಿದ್ದ ಕುರ್ಚಿ ಸುತ್ತಮುತ್ತ ಓಡಾಡಲು ಪ್ರಾರಂಭಿಸಿದ್ದಾನೆ.
ಈ ವೇಳೆ ಅಲ್ಬರ್ಟ್ ‘ಯಾರಪ್ಪ ನೀನು, ಈ ಸಮಯದಲ್ಲಿ ಇಲ್ಲೆಲ್ಲ ಓಡಾಡಬಾರದು ಕ್ಯಾಮರಾಗಳಿವೆ’ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಆ ಯುವಕ ಅಲ್ಬರ್ಟ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ತನ್ನ ಬಳಿ ಇದ್ದ ಚಾಕುವಿನಿಂದ ಆಲ್ಬರ್ಟ್ ಕೆನ್ನೆ ಕೊಯ್ದು ಪರಾರಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ತನ್ನ ಶಾಲೆಗಳನ್ನು ಶಿಕ್ಷಣ ಇಲಾಖೆಯ ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ ಬಿಬಿಎಂಪಿ
ಆಲ್ಬರ್ಟ್ ಅವರ ಕೆನ್ನೆಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಸ್ಥಳೀಯರೊಬ್ಬರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಮೇಲೆ ಆರೋಪಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.