- ಆರು ಜನರ ವಿರುದ್ಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ನಿನಗೆ ನಾನು ಯಾರೆಂದು ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಯುವತಿ
ಸ್ನೇಹಿತನ ಜನ್ಮದಿನಾಂಕ ಹೇಳಲು ನಿರಾಕರಿಸಿದವನ ಮೇಲೆ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜೆಪಿ ನಗರ ಠಾಣಾ ವ್ಯಾಪ್ತಿಯ ಪ್ರೆಸಿಡೆನ್ಸಿ ಕಾಂಪೋಸಿಟ್ ಪಿಯು ಕಾಲೇಜು ಬಳಿ ನಡೆದಿದೆ.
ಮಹಮ್ಮದ್ ಅಜೀಮ್ ಪಾಷ ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ಮಾಡಿದ ಆರೋಪದಡಿ ಆತನ ಜ್ಯೂನಿಯರ್ ವಿದ್ಯಾರ್ಥಿನಿ, ಆಕೆಯ ಸಹೋದರ ಮತ್ತು ಆತನ ಸ್ನೇಹಿತರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಮಹಮ್ಮದ್ ಅಜೀಮ್ ಪಾಷ ಎಂಬ ವಿದ್ಯಾರ್ಥಿ ಬೆಂಗಳೂರಿನ ಪ್ರೆಸಿಡೆನ್ಸಿ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಇತ್ತೀಚೆಗೆ ಈತನಿಗೆ ಪರಿಚಯ ಇರುವ ಮಹಮ್ಮದ್ ಉಬೇದ್ ಉಲಾ ಎಂಬುವರು ಅದೇ ಕಾಲೇಜಿಗೆ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದರು.
ಜುಲೈ 22ರಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಿನಿಯರ್ಸ್ ವೆಲ್ ಕಮ್ ಡೇ ಏರ್ಪಡಿಸಿದ್ದರು. ಈ ದಿನ ಮಹಮ್ಮದ್ ಅಜೀಮ್ ಪಾಷ ಅವರಿಗೆ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಓರ್ವ ವಿದ್ಯಾರ್ಥಿನಿ ಪರಿಚಯವಾಗಿದ್ದಾಳೆ.
ಜುಲೈ 24ರಂದು ಅಜೀಮ್ ಪಾಷಾ ಅವರನ್ನು ಯುವತಿ ಹೊರಗಡೆ ಕರೆದುಕೊಂಡು ಹೋಗಿ ನಿನ್ನ ಸ್ನೇಹಿತ ಮಹಮ್ಮದ್ ಉಬೇದ್ ಉಲಾ ಅವರ ಜನ್ಮದಿನಾಂಕ ತಿಳಿಸುವಂತೆ ಕೇಳಿದ್ದಾಳೆ. ಈ ವೇಳೆ, ಮಹಮ್ಮದ್ ಅಜೀಮ್ ಪಾಷಾ ತನಗೆ ಈ ಬಗ್ಗೆ ಮಾಹಿತಿ ಇಲ್ಲವೆಂದು ಹೇಳಿದ್ದಾನೆ.
ಮರುದಿನ ಜು.25 ರಂದು ಮಧ್ಯಾಹ್ನ ಕಾಲೇಜಿನಲ್ಲಿ ವಿಶ್ರಾಂತಿ ಸಮಯಕ್ಕೆ ಬಿಟ್ಟಾಗ ವಿದ್ಯಾರ್ಥಿನಿ ಮಹಮ್ಮದ್ ಉಬೇದ್ ಉಲಾ ಜನ್ಮ ದಿನಾಂಕವನ್ನು ನೀಡಲಿಲ್ಲ, ನಿನಗೆ ನಾನು ಯಾರೆಂದು ತೋರಿಸುತ್ತೇನೆ ಎಂದು ಮಹಮ್ಮದ್ ಅಜೀಮ್ ಪಾಷಗೆ ಬೆದರಿಕೆ ಹಾಕಿದ್ದಾಳೆ.
ಮಾರನೇ ದಿನ ಯುವತಿ ಝನ್ ಮತ್ತು ಶೇಕ್ ಸೇರಿದಂತೆ ಐವರನ್ನು ಕಾಲೇಜು ಬಳಿ ಕರೆಸಿ ಮಹಮ್ಮದ್ ಅಜೀಮ್ ಪಾಷಾ ಅವರನ್ನು ಕಾಲೇಜಿನಿಂದ ಬಲವಂತವಾಗಿ ಕಾಕ್ ಮ್ಯಾಜಿಕ್ ಬಳಿಗೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೋಟೆಲ್ ದರ ಏರಿಕೆ ವಿರುದ್ಧ ವಾಟಾಳ್ ನಾಗರಾಜ್ ಮುದ್ದೆ ಪ್ರತಿಭಟನೆ
ನಂತರ ಜಯನಗರ 4ನೇ ಟಿ ಬ್ಲಾಕ್ ನಲ್ಲಿರುವ ಬಿ.ಇ.ಎಸ್ ಕಾಲೇಜಿನ ಬಳಿ ಕರೆದುಕೊಂಡು ಹೋಗಿ ಇನ್ನಷ್ಟು ಥಳಿಸಿ, ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿ ಹೋಗಿದ್ದಾರೆ ಎಂದು ಮಹಮ್ಮದ್ ಅಜೀಮ್ ಪಾಷ ದೂರಿನಲ್ಲಿ ದಾಖಲಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಗಾಯಾಳು ವಿದ್ಯಾರ್ಥಿ ನೀಡಿರುವ ದೂರಿನನ್ವಯ ಜೆ.ಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.